ಶಾಲೆ ಸೇರದ ಮಕ್ಕಳು: ತುಮಕೂರಿನಲ್ಲಿ ವಲಸೆ ಕುಟುಂಬಗಳ ಮಕ್ಕಳು ಈಗಲೂ ಶಿಕ್ಷಣದಿಂದ ವಂಚಿತ

ತುಮಕೂರು: ಪಾವಗಡ ತಾಲೂಕಿನಲ್ಲಿ ಇದ್ದಿಲು ಸುಡುತ್ತಿರುವ ಮಹಾರಾಷ್ಟ್ರದ ವಲಸೆ ಕಾರ್ಮಿಕರಿದ್ದ ಬಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ, ಮಕ್ಕಳನ್ನು ತಕ್ಷಣವೇ ಶಾಲೆಗಳಿಗೆ ಕಳುಹಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ, ಈವರೆಗೆ ಒಂದು ಮಗು ಕೂಡ ಶಾಲೆಗಳತ್ತ ಮುಖ ಮಾಡದಿರುವುದು ಬೆಳಕಿಗೆ ಬಂದಿದೆ.
ಪಾವಗಡ ತಾಲೂಕಿನಲ್ಲಿ ನಲವತ್ತಕ್ಕೂ ಹೆಚ್ಚು ಮಹಾರಾಷ್ಟ್ರ ಮೂಲದ ಇದ್ದಿಲು ಸುಡುವ ಕಾರ್ಮಿಕರು ನೆಲೆಸಿದ್ದು, ಅವರೊಂದಿಗೆ ಅಂಗನವಾಡಿಯಿಂದ 10ನೇ ತರಗತಿಯ ಮಕ್ಕಳು ಕೂಡ ವಲಸೆ ಬಂದಿದ್ದಾರೆ.
ಈ ಬಗ್ಗೆ ವಿಕದಲ್ಲಿ ನವೆಂಬರ್ 3ರಂದು ವರದಿ ಪ್ರಕಟವಾದ ಬೆನ್ನಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿ, ಬಿಇಒ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿ ಮತ್ತು ಅಂಗನವಾಡಿ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು.ವಲಸೆ ಕಾರ್ಮಿಕರು ವಾಸಿಸುತ್ತಿರುವ ಸ್ಥಳದಲ್ಲಿರುವ ಮಕ್ಕಳ ಬಗ್ಗೆ ಮಾಹಿತಿ ಪಡೆದು, ತಕ್ಷಣಕ್ಕೆ ಆರೋಗ್ಯ ಇಲಾಖೆ, ಅಂಗನವಾಡಿ ಸಿಬ್ಬಂದಿ, ಪೌಷ್ಟಿಕ ಆಹಾರ ಸೇವನೆ ಕುರಿತಾಗಿ ಮತ್ತು ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಾಗಿದೆ.
ಜತೆಗೆ ಶಿಕ್ಷಣ ಇಲಾಖೆಯಿಂದ ಮಕ್ಕಳನ್ನು ತಕ್ಷಣವೇ ತಮ್ಮ ಗ್ರಾಮದ ಶಾಲೆಗಳಿಗೆ ಕಳುಹಿಸಿ, ಮಗು ಶಾಲೆಗೆ ಹಾಜರಾಗಿರುವ ಬಗ್ಗೆ ಮಾಹಿತಿ ನೀಡಲೇಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ಥನಾರಾಯಣ ಸೂಚಿಸಿದ್ದರು. ಆದರೆ, ಈ ಕುಟುಂಬಗಳನ್ನು ಕರೆ ತಂದಿರುವ ಏಜೆನ್ಸಿಗಳು, ಮಕ್ಕಳನ್ನು ಕಳುಹಿಸಿದರೆ ಪೋಷಕರು ಇರುವುದಿಲ್ಲ ಎಂಬ ನೆಪವೊಡ್ಡಿ ಅವರನ್ನು ಇಲ್ಲಿಯೇ ಉಳಿಸಿಕೊಂಡಿದ್ದಾರೆ
.ವಲಸೆ ಕಾರ್ಮಿಕರ ನತದೃಷ್ಟ ಜೀವನ: ತಾಲೂಕಿನ ವಿವಿಧ ಗ್ರಾಮಗಳ ಹೊರವಲಯಗಳಲ್ಲಿ ವಲಸೆ ಕಾರ್ಮಿಕರು, ಭದ್ರತೆ ಇಲ್ಲದೆ ಜೀವನ ಸಾಗಿಸುವುದರ ಜತೆಗೆ ಗುಣಮಟ್ಟದ ಆಹಾರ, ಶುದ್ಧ ಕುಡಿಯುವ ನೀರು ಸೇವನೆ ಮಾಡದೆ ಹಳ್ಳದಲ್ಲಿನ ನೀರು ಸೇವಿಸುತ್ತಿದ್ದಾರೆ.
ಸೀಮೆ ಜಾಲಿ ಮರಗಳ ಮಧ್ಯೆ ಅಮಾನುಷವಾಗಿ ಉರಿ ಬಿಸಿಲಿನಲ್ಲಿ, ಇದ್ದಿಲು ಸುಡುವ ಬೆಂಕಿಯ ಶಾಖಕ್ಕೆ ನಿತ್ಯವೂ ಅವರ ಮಕ್ಕಳು ಕೂಡ ಬೆಂದು ಬಾಲ್ಯವಸ್ಥೆಯಲ್ಲಿ ನಾನಾ ರೋಗಗಳಿಗೂ ತುತ್ತಾಗುವಂತಾಗಿದೆ.
ಆದರೆ, ಇವರನ್ನು ಕರೆತಂದಿರುವ ಏಜೆನ್ಸಿಗಳು ಮತ್ತು ಇವರಿಂದ ಇದ್ದಿಲು ಖರೀದಿಸುವ ಮಾಲೀಕರು ತಾತ್ಕಾಲಿಕ ಶೆಡ್‌ಗಳನ್ನು ಕೂಡ ನಿರ್ಮಾಣ ಮಾಡಿಕೊಡದ ಹಿನ್ನೆಲೆಯಲ್ಲಿ ವಿಷಕಾರಕ ಕ್ರಿಮಿಕೀಟಗಳ ಮಧ್ಯೆ ಹಾಗೂ ಕಾಡು ಪ್ರಾಣಿಗಳ ಭಯದಿಂದ ಪ್ರತಿಕ್ಷಣ ನಲುಗುತ್ತಾ, ಜೀವನ ಸಾಗಿಸುತ್ತಿರುವುದು ತಾಲೂಕು ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಎಲ್ಲಾ ಅಧಿಕಾರಿಗಳು ಒಂದೇ ಸ್ಥಳಕ್ಕೆ ಭೇಟಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಹಾರಾಷ್ಟ್ರದ ಈ ವಲಸೆ ಕಾರ್ಮಿಕರು ನೆಲೆಸಿದ್ದರೂ ಇದುವರೆಗೆ ಎಲ್ಲಾ ಅಧಿಕಾರಿಗಳು ಕೇವಲ ಹನುಮನಬೆಟ್ಟ ಗ್ರಾಮಕ್ಕೆ ಮಾತ್ರ ಭೇಟಿ ನೀಡಿ ಎಚ್ಚರಿಕೆ ಕೊಟ್ಟಿದ್ದಾರೆ. ಉಳಿದವರ ಪರಿಸ್ಥಿತಿಯನ್ನು ಇವರು ಗಮನಿಸಿಯೇ ಇಲ್ಲ.
ಈ ವಲಸೆ ಕಾರ್ಮಿಕರಿಗೆ ಕನಿಷ್ಟ ಭದ್ರತೆ ಒದಗಿಸುವಂತೆ ಏಜೆನ್ಸಿಗಳಿಗೆ ಸೂಚಿಸುವ ಕೆಲಸವನ್ನೂ ತಾಲೂಕು ಆಡಳಿತ ಮಾಡಿಲ್ಲ ಎಂದರೆ ವಿಪರ್ಯಾಸ. ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಜಿಲ್ಲಾಕಾರ್ಮಿಕ ಅಧಿಕಾರಿ, ಮಧುಗಿರಿ ಎಸಿ ಹಾಗೂ ತಹಸೀಲ್ದಾರ್, ಇಒ ಸೇರಿದಂತೆ ಆರಣ್ಯ ಇಲಾಖೆಯವರು ಇದ್ದಿಲು ಸಾಗಿಸಲು ಪರವಾನಗಿ ಮಾತ್ರ ನೀಡಿ ನಮಗೂ ಆವರಿಗೆ ಸಂಬಂಧವಿಲ್ಲ ಎಂಬಂತಿದ್ದರೆ, ಕಾರ್ಮಿಕರು ಸಂಕಷ್ಟದಲ್ಲಿರುವಾಗ ಕಾರ್ಮಿಕ ಇಲಾಖೆ ಕೂಡ ಮೌನವಾಗಿರುವುದು ಆಶ್ಚರ್ಯ ತರುವಂತಿದೆ.
ಆದಷ್ಟು ಬೇಗ ಈ ವಲಸೆ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ಮುಂದಿನ ಭವಿಷ್ಯದ ದೃಷ್ಟಿಯಿಂದ ಜಿಲ್ಲಾಡಳಿತದಿಂದಲಾದರೂ ಸೂಕ್ತವಾದ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
ಕಳೆದ ವಾರ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಾಖಲೆ ಇಲ್ಲದೆ ಗರ್ಭಿಣಿ ಮತ್ತು ಮಗು ಸಾವಿನಂತೆ ಇಲ್ಲೂ ಕೂಡ ನಡೆಯಬಾರದ ಘಟನೆ ನಡೆದರೆ ಯಾರು ಹೊಣೆ? ಇದ್ದಿಲು ಸಾಗಿಸಲು ಅನುಮತಿ ನೀಡುವ ಅರಣ್ಯ ಇಲಾಖೆ ಅನುಮತಿ ನಿರಾಕರಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಕೊಡುವವರೆಗೂ ಎಲ್ಲಾ ಅಧಿಕಾರಿ ವರ್ಗದವರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದಾಗ ಮಾತ್ರ ಭವಿಷ್ಯ ಭಾರತದ ಪ್ರಜೆಗಳು ಅಕ್ಷರ ಕಲಿಯಲು ಸಾಧ್ಯ.
ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ತಕ್ಷಣವೇ ಸೂಚಿಸಿ ಅಂಗನವಾಡಿ ಮಕ್ಕಳನ್ನು ಅಲ್ಲೇ ಶಾಲೆಗೆ ಕರೆತರುವ ಹಾಗೂ ಉಳಿದ ಮಕ್ಕಳನ್ನು ತಮ್ಮ ಗ್ರಾಮಗಳ ಶಾಲೆಗಳಿಗೆ ಕಳುಹಿಸಿ ಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಕೆ. ವಿದ್ಯಾಕುಮಾರಿ ಹೇಳಿದ್ರು.
ತಾಲೂಕಿನ ಯಾವ ಯಾವ ಗ್ರಾಮಗಳಲ್ಲಿ ಇವರು ನೆಲೆಸಿದ್ದಾರೆಂಬ ಮಾಹಿತಿ ಪಡೆದು ತಾಪಂ ಇಒ, ಬಿಇಒ ಹಾಗೂ ಅರಣ್ಯ ಇಲಾಖೆ ಮತ್ತು ಕಾರ್ಮಿಕ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ತಹಸೀಲ್ದಾರ್ ವರದರಾಜು ತಿಳಿಸಿದ್ರು.