
ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ಹೊಸ ಆದೇಶವೊಂದನ್ನ ಹೊರಡಿಸಿದೆ. ಇನ್ನು ಮುಂದೆ ನಿತ್ಯ ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರಗೀತೆ ಹಾಡಿಸೋದು ಕಡ್ಡಾಯ ಎಂದು ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.
ನಗರದ ಪ್ರತಿಷ್ಠಿತ ಕೆಲವು ಖಾಸಗಿ ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡಿಸದೇ ಇರುವ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ. ಇದರನುಸಾರ ಎಲ್ಲಾ ಶಾಲೆಗಳಲ್ಲಿ ಮುಂಜಾನೆ ವೇಳೆಯಲ್ಲಿ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಿಸಬೇಕು ಎಂದು ಸುತ್ತೋಲೆ ಹೊರಡಿಸಿದೆ.
ಈ ಆದೇಶದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ನೋಂದಾಯಿತ ಖಾಸಗಿ ಅನುದಾನಿತ/ಅನುದಾನರಹಿತ ಶಾಲೆ ಹಾಗೂ ಪದವಿಪೂರ್ವಕಾಲೇಜುಗಳಲ್ಲಿ ಪ್ರತಿ ದಿನ ಸಾಮೂಹಿಕ ಪ್ರಾರ್ಥನೆಯ ವೇಳೆಯಲ್ಲಿ ರಾಷ್ಟ್ರಗೀತೆ ಹಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದೆ.
ಶಾಲೆಗಳಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಯ ವೇಳೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆಯನ್ನು ಹಾಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ ಹಾಗೂ ರಾಷ್ಟ್ರದ ಬಗ್ಗೆ ಗೌರವದ ಭಾವನೆಗಳನ್ನು ಮೂಡಿಸಬೇಕಿರುತ್ತದೆ.
ಪ್ರತಿದಿನ ಮುಂಜಾನೆಯ ಸಾಮೂಹಿಕ ಪ್ರಾರ್ಥನೆಯ ವೇಳೆಯಲ್ಲಿ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆಯನ್ನು ಸಾಮೂಹಿಕವಾಗಿ ಹಾಡಿಸುವ ಸಂಪ್ರದಾಯವು ರಾಜ್ಯದ ಎಲ್ಲಾ ಶಾಲೆಗಳಲ್ಲಿ ರೂಢಿಯಲ್ಲಿರುತ್ತದೆ.
ಆದರೆ, ಬೆಂಗಳೂರಿನ ಕೆಲವು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ, ರಾಷ್ಟ್ರಗೀತೆಯನ್ನು ಪ್ರತಿದಿನ ಸಾಮೂಹಿಕ ಪ್ರಾರ್ಥನೆಯ ವೇಳೆಯಲ್ಲಿ ಹಾಡಿಸುತ್ತಿಲ್ಲ ಎಂಬ ದೂರುಗಳು ಬಂದಿರುತ್ತವೆ. ಈ ಬಗ್ಗೆ ಉಪನಿರ್ದೇಶಕರು (ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು (ಉತ್ತರ) ಹಾಗೂ ಉಪನಿರ್ದೇಶಕರು (ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು(ದಕ್ಷಿಣ) ರವರು ಸಂಬಂಧಿಸಿದ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಈ ಸಂಗತಿಯನ್ನು ಖಾತ್ರಿಪಡಿಸಿಕೊಂಡಿರುತ್ತಾರೆ.
ಶಾಲೆ, ಕಾಲೇಜುಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಒಂದೆಡೆ ಸೇರಿ ಸಾಮೂಹಿಕ ಪ್ರಾರ್ಥನ ಮಾಡುವುದಕ್ಕೆ ಸ್ಮಳಾವಕಾಶದ ಕೊರತೆ ಇದ್ದಲ್ಲಿ ತರಗತಿ ಕೋಣೆಯೊಳಗೆ ಪ್ರತಿದಿನ ರಾಷ್ಟ್ರಗೀತೆ ಹಾಡಿಸುವುದನ್ನು ಕಡ್ಡಾಯಗೊಳಿಸಿದೆ ಎಂದು ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.