
ರಾಯಚೂರು :ವಿದ್ಯಾರ್ಥಿಗಳ ಮುಂದೆಯೇ ಕುಡಿದು ಕುಪ್ಪಳಿಸಿದ ಐವರು ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಮಾನತು ಗೊಳಿಸಿದ್ದಾರೆ. ಲಿಂಗಸೂರು ಪಟ್ಟಣದ ಹಟ್ಟಿ ಚಿನ್ನದ ಗಣಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಮದ್ಯದ ಬಾಟಲಿಯನ್ನು ಹಿಡಿದು ನರ್ತಿಸಿದ್ದ ಶಿಕ್ಷಕರ ವರ್ತನೆಯನ್ನು ಕಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ ನಂತರ ಅವರನ್ನು ಅಮಾನತ್ತುಗೊಳಿಸಲಾಗಿದೆ.
ಮುಖ್ಯಶಿಕ್ಷಕ ಮುರಳೀಧರ್ ರಾವ್, ದೈಹಿಕ ಶಿಕ್ಷಕ ಚೆನ್ನಪ್ಪ ರಾಥೋಡ್ ಶಿಕ್ಷಕರಾದ ಲಿಂಗಪ್ಪ ಪೂಜಾರಾ, ಕೇಶವ್ ಕುಮಾರ್, ಅಬ್ದುಲ್ ಅಜೀಜ್ ಎಣ್ಣೆ ಪಾರ್ಟಿ ಮಾಡಿ ಈಗ ಸಂಕಷ್ಟಕ್ಕೆ ಸಿಲುಕಿದವರಾಗಿದ್ದಾರೆ.
ಮಕ್ಕಳಿಗೆ ಬುದ್ಧಿ ಹೇಳುವವರೆ ಈ ರೀತಿ ವರ್ತಿಸಿದರೆ ಹೇಗೆ? ಎಂದು ಪೋಷಕರು ಶಿಕ್ಷಣ ಇಲಾಖೆ ಅಪರ ಆಯುಕ್ತರಿಗೆ ದೂರು ನೀಡಿದ್ದರು. ಇದರನ್ವಯ ತುರ್ತು ವಿಚಾರಣೆ ನಡೆಸಿ ಈ ಶಿಕ್ಷಕರನ್ನು ಅಮಾನತ್ತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಇವರು ವಿದ್ಯಾರ್ಥಿಗಳ ಮಧ್ಯೆ ಬಾಟಲ್ಗಳನ್ನು ಹಿಡಿದು ಕುಣಿದು ಕುಪ್ಪಳಿಸಿದ್ದನ್ನು ಕೆಲವರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದು, ಅದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಕಂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುಜುಗರಕ್ಕೆ ಈಡಾಗಿದ್ದಾರೆ. ಶಾಲೆಗೆ ಅರ್ಧ ದಿನ ರಜೆ ಘೋಷಿಸಿ ಈ ಶಿಕ್ಷಕರು ಎಣ್ಣೆ ಪಾರ್ಟಿ ಮಾಡಿದ್ದರು ಎಂದು ಆರೋಪಿಸಲಾಗಿದೆ.