ಶಾಕಿಂಗ್ : ಮಂಡ್ಯ ಜಿಲ್ಲೆಯಲ್ಲಿ ಹೊಟ್ಟೆಯಿಂದ ಕೆಳಭಾಗ ಕತ್ತರಿಸಿದ ಇಬ್ಬರು ಮಹಿಳೆಯರ ಮೃತದೇಹ ಪತ್ತೆ..!
Two Women Dead Bodies found in Mandya District

ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಎರಡು ಕಡೆ ಪ್ರತ್ಯೇಕ ಪ್ರಕರಣದಲ್ಲಿ ಹೊಟ್ಟೆಯಿಂದ ಕೆಳಭಾಗ ಕತ್ತರಿಸಿದ ಇಬ್ಬರು ಮಹಿಳೆಯರ ಮೃತ ದೇಹ ಪತ್ತೆಯಾಗಿದೆ.ಇಷ್ಟು ಭೀಭತ್ಸವಾಗಿ ಹತ್ಯೆ ಮಾಡಿರುವ ಪ್ರಕರಣದಿಂದ ಕಂಡು ಇಡೀ ಮಂಡ್ಯ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ.ಹೌದು! ಸಕ್ಕರೆನಾಡು ಮಂಡ್ಯ ಜಿಲ್ಲೆಯ ಪಾಂಡವಪುರ ಟೌನ್ ಪೊಲೀಸ್ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಒಂದೇ ದಿನ ಬೇರೆ ಬೇರೆ ಕಡೆ ಹೊಟ್ಟೆಯಿಂದ ಕೆಳಭಾಗ ಕತ್ತರಿಸಿದ ಇಬ್ಬರು ಮಹಿಳೆಯರ ಮೃತ ದೇಹ ಪತ್ತೆಯಾಗಿವೆ.
ಪಾಂಡವಪುರ ತಾಲೂಕಿನ ಬೇಬಿ ಕೆರೆ- ಕೆ.ಬೆಟ್ಟಹಳ್ಳಿ ಮಾರ್ಗ ಮಧ್ಯೆ ಇರುವ ಬೇಬಿ ಕೆರೆಯ ನಾಲೆಯಲ್ಲಿ 30 ರಿಂದ 35 ವರ್ಷ ಪ್ರಾಯದ ಮಹಿಳೆಯ ಶವ ಅರ್ಧ ಕತ್ತರಿಸಿದ ರೂಪದಲ್ಲಿ ಪತ್ತೆಯಾಗಿದೆ. ಮತ್ತೊಂದು ಮಹಿಳೆಯ ಶವ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಅರೆ ಕೆರೆ ಗ್ರಾಮದ ಬಳಿಯ ಸಿಡಿಎಸ್ ನಾಲೆಯಲ್ಲಿ ತೇಲಿ ಬಂದು ರೈತನ ಜಮೀನಿನಲ್ಲಿ ಸಿಕ್ಕಿದೆ. ಪತ್ತೆಯಾದ ಎರಡೂ ಶವಗಳ ಅರ್ಧಭಾಗವನ್ನು ಕತ್ತರಿಸಿ ಚೀಲದಲ್ಲಿ ಹಾಕಿ ಎರಡು ಕಾಲುಗಳನ್ನು ಕಟ್ಟಿ ನೀರಿಗೆ ಬಿಸಾಡಿದ್ದಾರೆ.
ಇನ್ನು ಎರಡು ಕಡೆ ಪ್ರತ್ಯೇಕವಾಗಿ ದೇಹದ ಅರ್ಧಭಾಗ ಪತ್ತೆಯಾಗಿರುವ ಸುದ್ದಿ ತಿಳಿದು ಪಾಂಡವಪುರ ಹಾಗೂ ಅರೆಕೆರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಎರಡೂ ಕಡೆ ಸಿಕ್ಕಿರುವ ಅರ್ಧ ಕತ್ತರಿಸಿದ ಮೃತ ದೇಹಗಳ ಹೊಟ್ಟೆಯಿಂದ ಕೆಳಗಿನ ಭಾಗ ಮಾತ್ರ ಪತ್ತೆಯಾಗಿದೆ. ಉಳಿದ ಭಾಗ ಇನ್ನೂ ಸಿಕ್ಕಿಲ್ಲ.
ಸಿಕ್ಕಿರುವ ಎರಡೂ ಶವಗಳ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿದ್ದು,ಬೇರೆಲ್ಲೋ ಕೊಲೆ ಮಾಡಿ ಬಳಿಕ ದೇಹ ಕತ್ತರಿಸಿ ಸಾಕ್ಷ್ಯ ನಾಶಕ್ಕೆ ದುಷ್ಕರ್ಮಿಗಳು ಯತ್ನಿಸಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೆ ಈ ಎರಡು ಶವಗಳ ಉಳಿದರ್ಧ ದೇಹದ ಪತ್ತೆಗೆ ಶೋ ಧ ಕಾರ್ಯ ಆರಂಭಿಸಿದ್ದಾರೆ.
ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಹಿಳೆಯರ ಕತ್ತರಿಸಿದ ದೇಹ ಪತ್ತೆಯಾದ ಸುದ್ದಿ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ತಮ್ಮ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಪತ್ತೆಯಾಗಿರುವ ಈ ಇಬ್ಬರು ಮಹಿಳೆಯ ಬಗ್ಗೆ ಮಾಹಿತಿ ಕಲೆ ಹಾಕಿ ಈ ಪ್ರಕರಣ ಭೇಧಿಸಲು ವಿಶೇಷ ಪೊಲೀಸ್ ತಂಡ ರಚಿಸಿದ್ದಾರೆ.
ಒಟ್ಟಾರೆ ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಇದೀಗ ಪತ್ತೆಯಾಗಿರುವ ಇಬ್ಬರು ಮಹಿಳೆಯರ ಕತ್ತರಿಸಿದ ಅರ್ಧ ಭಾಗ ಮೃತ ದೇಹಗಳು ಜಿಲ್ಲೆಯ ಜನರಲ್ಲಿ ಆತಂಕ ಉಂಟುಮಾಡಿದೆ. ಇಂತಹ ಭೀಭತ್ಸ ಪ್ರಕರಣದಿಂದ ಇಡೀ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದು, ಪೊಲೀಸರು ಪ್ರಕರಣದ ಬೆನ್ನು ಹತ್ತಿ ತನಿಖೆ ಆರಂಭಿಸಿದ್ದಾರೆ.