ಶವಾಗಾರ ಬಳಕೆಗೂ ಜಿ.ಎಸ್.ಟಿ: ಎಂಬಿಪಿ ಟೀಕೆ

ಶವಾಗಾರದ ಬಳಕೆಯ ಮೇಲೆ ಸಹ ಶೇಕಡ ೧೮.೫ರಷ್ಟು ಜಿ.ಎಸ್.ಟಿ ಹೇರುವ ಮೂಲಕ ಸಾವಿನಲ್ಲೂ ನೆಮ್ಮದಿ ಇಲ್ಲದಂತಹ ಸ್ಥಿತಿಯನ್ನು ಕೇಂದ್ರ ಸರಕಾರ ತಂದಿಟ್ಟಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಣ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ಟೀಕಿಸಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಪೆಟ್ರೋಲ್ – ಡೀಸೆಲ್, ಅನಿಲ ಸಿಲಿಂಡರ್ ದರ ಜನರ ಕೈಗೆಟುಕದ ಮಟ್ಟಕ್ಕೆ ತಲುಪಿದೆ. ಮತ್ತೊಂದೆಡೆ, ದಿನಬಳಕೆಯ ಆಹಾರ ಧಾನ್ಯಗಳ ಮೇಲೆಯೂ ಜಿ.ಎಸ್.ಟಿ ಜಾರಿಗೊಳಿಸುವ ಮೂಲಕ ಕೇಂದ್ರ ಸರಕಾರ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದ ನಂತರ ಅಚ್ಛೆ ದಿನ್ ಬರುವುದಾಗಿ ವ್ಯಾಪಕ ಪ್ರಚಾರ ಕೈಗೊಳ್ಳಲಾಯಿತು. ಪ್ರತಿ ವರ್ಷ ೨ ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡುತ್ತಾ ನೋಟು ಅಮಾನ್ಯ ಮಾಡಲಾಯಿತು. ಜೊತೆಗೆ, ಜಿ.ಎಸ್.ಟಿ ಹೇರಲಾಯಿತು. ಕೋವಿಡ್ ಸಂದರ್ಭವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣಕ್ಕೆ ಇರುವ ಉದ್ಯೋಗಗಳನ್ನೂ ಕಳೆದುಕೊಂಡು ಜನರು ಕಂಗಾಲಾಗುವ ಸ್ಥಿತಿ ನಿರ್ಮಾಣಗೊಂಡಿತು.
ಹೀಗಾಗಿ, ಮೋದಿಯವರ ಅಚ್ಛೆ ದಿನ್ ಬಗ್ಗೆ ಜನರಿಗೆ ವಿಶ್ವಾಸ ಹೊರಟು ಹೋಗಿದೆ. ಆ ಕಾರಣಕ್ಕಾಗಿ, ೨೦೧೪ಕ್ಕೂ ಮುಂಚೆ ದೇಶದಲ್ಲಿದ್ದ ಬುರೇ ದಿನ್ (ಕೆಟ್ಟ ದಿನ) ವಾಪಸ್ ನೀಡುವಂತೆ ಜನರು ಬೇಡುವ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಅವರು ಲೇವಡಿ ಮಾಡಿದರು.ಇ.ಡಿ.-ಸಿಬಿಐ ದಾಳಿ ಏಕಿಲ್ಲ?:ಕರ್ನಾಟಕದಲ್ಲಿರುವ ೪೦ ಪಸೆಂಟ್ ಸರಕಾರ ತಮ್ಮ ಬದುಕು ಹೈರಾಣಾಗಿಸಿದೆ ಎಂದು ಸ್ವತಃ ರಾಜ್ಯ ಗುತ್ತಿಗೆದಾರರ ಸಂಘ ನೇರವಾಗಿ ಪ್ರಧಾನಿ ಮೋದಿಯರಿಗೆ ಪತ್ರ ಬರೆದಿತ್ತು.
ಇಷ್ಟಾದರೂ ಮೋದಿಯವರು ರಾಜ್ಯದಲಿರುವ ಬಿಜೆಪಿಯ ಭ್ರಷ್ಟ ಸಚಿವರ ಮನೆಗಳ ಮೇಲೆ ಏಕೆ ಇ.ಡಿ ಮತ್ತು ಸಿಬಿಐ ದಾಳಿಗೆ ಮುಂದಾಗಲಿಲ್ಲ? ಎಂದು ಮಾಜಿ ಸಚಿವ ಪಾಟೀಲ್ ಪ್ರಶ್ನಿಸಿದರು.ಕರ್ನಾಟಕದಲ್ಲಿ ಸರಕಾರ ಎಂಬುದೇ ಇಲ್ಲ. ಇಲ್ಲಿ ಏನಿದ್ದರೂ ಸರಕಾರವನ್ನು ಮ್ಯಾನೇಜ್ ಮಾಡಲಾಗುತ್ತಿದೆ ಎಂದು ಸ್ವತಃ ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಹಾಗಾಗಿ, ರಾಜ್ಯದಲ್ಲಿ ಸರಕಾರ ಎಲ್ಲ ರೀತಿಯಿಂದಲೂ ವಿಫಲಗೊಂಡಿದೆ ಎಂದು ಸಾಬೀತುಪಡಿಸಲು ಇದಕ್ಕಿಂತಲೂ ಉತ್ತಮ ಪುರಾವೆ ಬೇಕೇ? ಎಂದು ಅವರು ಪ್ರಶ್ನಿಸಿದರು.ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದು, ಎಲೆಕ್ಷನ್ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ.
ಬಿಜೆಪಿಯ ದುರಾಡಳಿತದಿಂದ ಜನರು ಬೇಸತ್ತಿದ್ದು ಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ೧೨೦ ರಿಂದ ೧೩೦ ಸ್ಥಾನಗಳಲ್ಲಿ ಗೆಲುವು ತಂದು ಕೊಡಲಿದ್ದಾರೆಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಜಾತಿ-ಧರ್ಮದ ಗೋಜಿಲ್ಲದ ಚುನಾವಣೆರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಮಾತೆತ್ತಿದರೆ ಧರ್ಮದ ಹೆಸರಿನಲ್ಲಿ ಜನಜೀವನ ಅಸ್ತವ್ಯಸ್ಥಗೊಳಿಸುವ ಯತ್ನಗಳು ನಿರಂತರವಾಗಿ ನಡೆಯುತ್ತಿವೆ.
ಇದರಿಂದ ಜನರು ರೋಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಜನರು ಜಾತಿ-ಧರ್ಮ ಸೇರಿದಂತೆ ಯಾವುದೇ ಅನಗತ್ಯ ಗೊಂದಲಗಳಿಗೆ ಮಣೆ ಹಾಕದೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಲಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು