ಶಬರಿಮಲೆಯಲ್ಲಿ ಭಕ್ತಸಾಗರ ನಿಯಂತ್ರಿಸಲು ಪೊಲೀಸರ ಪರದಾಟ

ಪ್ರಸಿದ್ಧ ಶ್ರದ್ಧಾ ಕೇಂದ್ರ ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಪ್ರವಾಹದೋಪಾದಿಯಲ್ಲಿ ಹೆಚ್ಚಾಗಿದ್ದು, ಯಾತ್ರಾತ್ರಿಗಳನ್ನು ನಿಯಂತ್ರಿಸಲು ಪೊಲೀಸರು ಪರದಾಡುವಂತಾಗಿದೆ.ಜ್ಯೋತಿ ದರ್ಶನಕ್ಕೆ ಇನ್ನೂ 20ಕ್ಕೂ ಹೆಚ್ಚು ದಿನಗಳು ಬಾಕಿ ಇರುವಾಗಲೇ ಭಕ್ತರ ಸಂಖ್ಯೆ ಲಕ್ಷ ದಾಟಿದೆ.
ಇಂದು ಬೆಳಗ್ಗೆ ಲಕ್ಷಾಂತರ ಮಂದಿ ದರ್ಶನಕ್ಕಾಗಿ ಮುಗಿ ಬಿದ್ದಿದ್ದರು. ಶಬರಿಮಾಲ ದೇವಸ್ಥಾನ ಸಮಿತಿ ಪ್ರತಿ ದಿನ 90 ಸಾವಿರ ಮಂದಿಗೆ ಯಾತ್ರಿಗಳ ಸಂಖ್ಯೆಯನ್ನು ನಿಗದಿ ಮಾಡಲು ಪ್ರಯತ್ನಿಸುತ್ತಿದೆ.ಆದರೆ ಸೋಮವಾರದಿಂದ ಆನ್ಲೈನ್ ನೋಂದಣಿ ಒಂದು ಲಕ್ಷ ದಾಟುತ್ತಿದೆ.
ಬುಧವಾರ ಸುಮಾರು ಒಂದು ಲಕ್ಷ 20 ಸಾವಿರಕ್ಕೂ ಮೀರಿದ ಭಕ್ತರು ಆಗಮಿಸಿದ್ದರು. ಬೆಳಗ್ಗೆ 5 ಗಂಟೆಗೆ ಆರಂಭವಾದ ದರ್ಶನಕ್ಕೆ ಜನ ಸಾಲುಗಟ್ಟಿ ಬಂದಿದ್ದರು. ನಿನ್ನೆ ರಾತ್ರಿ 10 ಗಂಟೆಗೆ ದರ್ಶನ ಮುಕ್ತಾಯವಾದಾಗಲೂ ಸಾವಿರಾರು ಮಂದಿ ಬಾಕಿ ಉಳಿದಿದ್ದರು.
ಹಲವು ದೇಶಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ನಿರ್ಬಂಧಗಳನ್ನು ಜಾರಿಗೊಳಿಸಬಹುದು ಎಂಬ ಆತಂಕದಿಂದ ಮಾಲೆ ಧರಿಸಿದ ಭಕ್ತರ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಇದರಿಂದಾಗಿ ದರ್ಶನಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ.
ಹೈಕೋರ್ಟ್ ಆದೇಶದ ಮೇರೆಗೆ ದೇವಸ್ಥಾನದಲ್ಲಿ ವಿವಿಐಪಿ ಸೌಲಭ್ಯಗಳನ್ನು ತೆಗೆದು ಹಾಕಲಾಗಿದೆ. ಹಾಗಾಗಿ ಎಲ್ಲ ಭಕ್ತರು ಸಾಮಾನ್ಯ ಸಾಲಿನಲ್ಲಿಯೇ ತೆರಳಿ ದರ್ಶನ ಪಡೆಯುತ್ತಿದ್ದಾರೆ.