ರಾಜ್ಯ

ವ್ಯಕ್ತಿ ಬಲಿಯಾದರೂ ದುರಸ್ತಿಯಾಗದ ರಾಜಕಾಲುವೆ: ಬಿಬಿಎಂಪಿಯ ನಿರ್ಲಕ್ಷ್ಯವನ್ನು ಕೇಳೋರೇ ಇಲ್ಲವೇ?

ಪೀಣ್ಯ, ದಾಸರಹಳ್ಳಿ: ರುಕ್ಮಿಣಿನಗರದ ಮುಖ್ಯರಸ್ತೆಯಲ್ಲಿರುವ ತೆರೆದ ರಾಜಕಾಲುವೆಗೆ ವೆಂಕಟೇಶ್‌ ಎಂಬುವವರು ಸೆ.27ರಂದು ಕಾಲು ಜಾರಿ ಬಿದ್ದು ಸಾವನ್ನಪ್ಪಿದ ನಂತರವೂ ರಾಜಕಾಲುವೆ ಮೇಲೆ ಸ್ಪ್ಯಾಬ್‌ಗಳನ್ನು ಹಾಕದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

ರಾಜಕಾಲುವೆಗೆ ಬಿದ್ದು ಸಾವನ್ನಪ್ಪಿರುವ ವೆಂಕಟೇಶನ ಕುಟುಂಬಕ್ಕೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಮೃತನ ಕುಟುಂಬಕ್ಕೆ ಬಿಬಿಎಂಪಿ ಅಧಿಕಾರಿಗಳಾಗಲಿ, ಸ್ಥಳೀಯ ಶಾಸಕರಾಗಲಿ ಪರಿಹಾರ ಕೊಡಿಸುವುದಿರಲಿ, ಸಾಂತ್ವನವನ್ನೂ ಹೇಳಿಲ್ಲ.

ವಿದ್ಯಾನಗರದ ಕಬ್ಬಾಳು ಗ್ರಾಮದ ವೆಂಕಟೇಶ್‌( 31) ಮೃತದೇಹವನ್ನು ದಾಸರಹಳ್ಳಿ ಬಿಬಿಎಂಪಿ ವಲಯ ಕಚೇರಿ ಮುಂಭಾಗ ಇಟ್ಟುಕೊಂಡು ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದಾಗ ತಕ್ಷಣದಲ್ಲೇ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಲಾಗಿತ್ತು.

ಆದರೆ ಆ ಭರವಸೆ ಈಗ ಹುಸಿಯಾಗಿದೆ.ಸ್ಥಳೀಯ ಶಾಸಕರಾದ ಆರ್‌.ಮಂಜುನಾಥ್‌ ಸಹ ಮೃತನ ಕುಟುಂಬಕ್ಕೆ ಪರಿಹಾರ ಕೊಡಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಮೇ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರುಕ್ಮಿಣಿನಗರದ ರಾಜಕಾಲುವೆಯ ಹೂಳೆತ್ತುವ ಸಂದರ್ಭದಲ್ಲಿ ಅದರ ಮೇಲೆ ಹಾಸಲಾಗಿದ್ದ ಸ್ಪ್ಯಾಬ್‌ ಗಳನ್ನು ಕಿತ್ತು ಹಾಕಲಾಗಿತ್ತು.

ಕೆಲಸ ಆದ ಮೇಲೆ ಅದನ್ನು ಮುಚ್ಚದೆ ನಿರ್ಲಕ್ಷ್ಯ ವಹಿಸಿದ್ದರಿಂದ ಒಂದು ಜೀವ ಬಲಿಯಾಗಿದೆ. ಇಷ್ಟಾದರೂ ಬಿಬಿಎಂಪಿ ಅಧಿಕಾರಿಗಳಾಗಲಿ, ಗುತ್ತಿಗೆದಾರನಾಗಲಿ ಕ್ರಮವಹಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.ಸ್ಲಾಬ್‌ಗಳನ್ನು ಕಿತ್ತು ಹಾಕಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಆಗಿದ್ದು, ವಾಹನಗಳನ್ನು ರಸ್ತೆಯಲ್ಲೇ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಒದಗಿ ಬಂದಿದೆ.

ಒಂದೆರಡು ವಾಹನಗಳ ಕಳ್ಳತನವೂ ಆಗಿದೆ. ರಸ್ತೆ ಬದಿಗಿದ್ದ ಅಂಗಡಿ ಮುಂಗಟ್ಟುಗಳ ಪರಿಸ್ಥಿತಿ ಹೇಳತೀರದ್ದಾಗಿದೆ. ಶಾಲೆಗಳಿಗೆ ಹೋಗುವ ಮಕ್ಕಳನ್ನು ಸುರಕ್ಷಿತವಾಗಿ ಕಾಲುವೆ ದಾಟಿಸಿ ಕಳುಹಿಸುವುದೇ ಒಂದು ಕಾಯಕವಾಗಿ ಹೋಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಸ್ಥಳೀಯ ಶಾಸಕರ ಗಮನಕ್ಕೆ ತಂದರೆ ಸರಿ ಮಾಡಿಸಿಕೊಡುವ ಸುಳ್ಳು ಭರವಸೆ ನೀಡುತ್ತಲೇ ಬರುತ್ತಿದ್ದಾರೆ. ಒಬ್ಬ ವ್ಯಕ್ತಿ ಬಲಿಯಾದ ಮೇಲೂ ಎಚ್ಚೆತ್ತುಕೊಳ್ಳದ ಆಡಳಿತ ವರ್ಗ ಮತ್ತೊಂದು ಅನಾಹುತ ಸಂಭವಿಸಿ ಜನ ರೊಚ್ಚಿಗೇಳುವ ಮುನ್ನ ಕ್ರಮವಹಿಸಬೇಕಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button