
ಕಾಲು ಚಿಕಿತ್ಸೆಗೆ ತೆರಳಿದ 17 ವರ್ಷದ ಉದಯೋನ್ಮುಖ ಫುಟ್ಬಾಲ್ ಆಟಗಾರ್ತಿ ವೈದ್ಯರ ಎಡವಟ್ಟಿನಿಂದ ಮೃತಪಟ್ಟ ಆಘಾತಕಾರಿ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಸಂಭವಿಸಿದೆ.
ಮಂಡಿ ಸಂಬಂಧಿತ ಶಸ್ತ್ರಚಿಕಿತ್ಸೆಗೆ ವೈದ್ಯರ ಬಳಿ ಹೋಗಿದ್ದ ಪ್ರಿಯಾ ಎಂಬ ಫುಟ್ಬಾಲ್ ಆಟಗಾರ್ತಿ ಇದೀಗ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದು, ಇಬ್ಬರು ವೈದ್ಯರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಮಂಡಿ ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಂತರ ಪ್ರಿಯಾ ಬಲ ಕಾಲು ಬಲ ಕಳೆದುಕೊಂಡಿತು. ಇದರ ಬೆನ್ನಲ್ಲೇ ಅಂಗಾಂಗ ವೈಫಲ್ಯಕ್ಕೆ ಒಳಗಾಗಿ ಮೃತಪಟ್ಟಿದ್ದಾಳೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ರಾಜೀವ್ ಗಾಂಧಿ ಸರಕಾರಿ ಜನರಲ್ ಆಸ್ಪತ್ರೆ ಅಧಿಕಾರಿಗಳ ಪ್ರಕಾರ ಪ್ರಿಯಾ ಶಸ್ತ್ರಚಿಕಿತ್ಸೆ ಸರಿಯಾಗಿಯೇ ಆಗಿದೆ.
ಆದರೆ ಬ್ಯಾಂಡೇಜ್ ಬಲವಾಗಿ ಮಾಡಿದ್ದರಿಂದ ರಕ್ತ ಪರಿಚಲನೆ ನಿಂತಿದ್ದರಿಂದ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ನವೆಂಬರ್ 8ರಂದು ಪ್ರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯಲ್ಲಿ ಲೋಪ ಆಗಲು ಇಬ್ಬರು ವೈದ್ಯರು ಕಾರಣರಾಗಿದ್ದಾರೆ.
ಅವರನ್ನು ಸೇವೆಯಿಂದ ಕೂಡಲೇ ಅಮಾನತು ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಸುಬ್ರಹ್ಮಣ್ಯಂ ತಿಳಿಸಿದ್ದಾರೆ.
ಪ್ರಿಯಾಳ ಸಾವಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಒಬ್ಬ ಸದಸ್ಯನಿಗೆ ಸರಕಾರಿ ಕೆಲಸ ನೀಡುವ ಘೋಷಣೆಯನ್ನು ಮಾಡಿದೆ.