ರಾಜ್ಯ

ವೀರೇಂದ್ರ ಹೆಗ್ಗಡೆಯವರ ರಾಜ್ಯಸಭೆ ಆಯ್ಕೆ ಸಂತೋಷ ತಂದಿದೆ: ಡಿ.ಕೆ. ಶಿವಕುಮಾರ್

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ಪಕ್ಷಾತೀತವಾಗಿ ನಾಮನಿರ್ದೇಶನ ಮಾಡಿರುವುದು ನನಗೆ ಹೃದಯ ತುಂಬಿದ ಸಂತೋಷ ತಂದಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ವೀರೇಂದ್ರ ಹೆಗ್ಗಡೆಯವರ ನಿವಾಸಕ್ಕೆ ಶುಕ್ರವಾರ ರಾತ್ರಿ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು;’ವೀರೇಂದ್ರ ಹೆಗ್ಗಡೆ ಅವರಿಗೂ ನನಗೂ ಇರುವ ಸಂಬಂಧ ಧರ್ಮಸ್ಥಳದ ಮಂಜುನಾಥ ಸ್ವಾಮಿಗೂ ಹಾಗೂ ಭಕ್ತನಿಗೂ ಇರುವ ಸಂಬಂಧದಂತೆ.

ಈ ಬಗ್ಗೆ ನನಗೆ ಬಹಳ ಪ್ರೀತಿ, ಗೌರವವಿದೆ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಎಂಬ ದೊಡ್ಡ ಕ್ಷೇತ್ರಕ್ಕೆ ಧರ್ಮಾಧಿಕಾರಿಯಾಗಿದ್ದಾರೆ. ಮಾತು ಬಿಡದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ ಎಂಬ ಮಾತಿನಂತೆ, ಆ ಮಂಜುನಾಥನ ಸನ್ನಿಧಿಯಲ್ಲಿ ಕೇಳಿದ್ದನ್ನು ಮಂಜುನಾಥ ನಡೆಸಿಕೊಡುತ್ತಾನೆ.

ಕೇಂದ್ರ ಸರ್ಕಾರ ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದು, ಇದಕ್ಕೆ ಅವರೂ ಒಪ್ಪಿಕೊಂಡಿರುವುದು ಬಹಳ ಸಂತೋಷದ ವಿಚಾರ.ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೂಲಕ ಅವರು ಮಾಡಿರುವ ಸೇವೆಗಳು ಅಪಾರವಾಗಿವೆ.

ಇವರ ಯೋಜನೆಗಳ ಪ್ರೇರಣೆಯಿಂದಲೇ ದೇಶದಾದ್ಯಂತ ಕಾಂಗ್ರೆಸ್ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿತು. ಗ್ರಾಮೀಣ ಪ್ರದೇಶಗಳಲ್ಲಿ ಹೈನೋದ್ಯಮ, ಹಾಲು ಒಕ್ಕೂಟಗಳಿಗೆ ಅವರು ಹಣ ನೀಡುತ್ತಿದ್ದಾರೆ. ಅವರ ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳ ದೇವಾಲಯಗಳಿಗೆ ಪ್ರೋತ್ಸಾಹ ಧನ ನೀಡುತ್ತಿದ್ದಾರೆ.ಯುವಕರಿಗೆ ಸ್ವಯಂ ಉದ್ಯೋಗ ಕೌಶಲ್ಯ ತರಬೇತಿಗೆ ಆದ್ಯತೆ ನೀಡಿ, ಅವರಿಗೆ ಆರ್ಥಿಕ ನೆರವನ್ನು ನೀಡಲಾಗುತ್ತಿದೆ.

ಈ ರೀತಿ ವೀರೇಂದ್ರ ಹೆಗ್ಗಡೆಯವರು ಸಮಾಜದ ಸೇವೆ ಮಾಡಿಕೊಂಡು ಬಂದಿದ್ದಾರೆ. ಇಂತಹ ವ್ಯಕ್ತಿ ನಮ್ಮ ರಾಜ್ಯದಿಂದ ರಾಜ್ಯ ಸಭೆಗೆ ಆಯ್ಕೆಯಾಗಿರುವುದಕ್ಕೆ ಅವರಿಗೆ ವೈಯಕ್ತಿಕವಾಗಿ ಹಾಗೂ ಪಕ್ಷದ ಅಧ್ಯಕ್ಷನಾಗಿ ಅಭಿನಂದನೆ ಸಲ್ಲಿಸುತ್ತೇನೆ.

ರಾಜ್ಯದ ಜನತೆಗೆ ಅವರಿಂದ ಇನ್ನಷ್ಟು ಹೆಚ್ಚಿನ ಸೇವೆಯಾಗಲಿ ಎಂದು ಆಶಿಸುತ್ತೇನೆ.ನಾನು ರಾಜಕಾರಣಿಯಾಗಿ ರಾಜ್ಯಸಭೆಗೆ ಹೋಗುವುದಿಲ್ಲ ಎಂಬ ವೀರೇಂದ್ರ ಹೆಗ್ಗಡೆಯವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ‘ನಾನು ಅವರ ಕುಟುಂಬದವರಿಗೆ 25 ವರ್ಷಗಳ ಹಿಂದೆಯೇ ರಾಜಕೀಯಕ್ಕೆ ಬರುವಂತೆ ಕೇಳಿದ್ದೇನೆ.

ಅವರು ಒಪ್ಪಲಿಲ್ಲ. ತಮ್ಮ ಕ್ಷೇತ್ರಕ್ಕೆ ಇರುವ ಗಾಂಭೀರ್ಯತೆ ಕಳೆದುಕೊಳ್ಳಲು ಅವರಿಗೆ ಇಚ್ಛೆ ಇಲ್ಲ. ಹೀಗಾಗಿ ಅವರು ರಾಜಕೀಯ ಪ್ರವೇಶಕ್ಕೆ ಮನಸ್ಸು ಮಾಡಿಲ್ಲ.

ರಾಜ್ಯಸಭೆಯಲ್ಲಿ ರಾಜಕೀಯೇತರ ಶಕ್ತಿಯಾಗಿ ಕೆಲಸ ಮಾಡಲಿದ್ದಾರೆ.

ನಾವೆಲ್ಲರೂ ಅವರ ಆಶೀರ್ವಾದ, ಸೇವೆಯನ್ನು ಪಡೆದಿದ್ದು, ಅವರು ರಾಜ್ಯಸಭೆಗೆ ಆಯ್ಕೆ ಆಗಿರುವುದರಿಂದ ಹೃದಯ ತುಂಬಿ ಬಂದಿದೆ’ ಎಂದು ಉತ್ತರಿಸಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button