ರಾಜಕೀಯರಾಜ್ಯ

ವಿಶ್ವಾಸಮತ ಯಾಚನೆಗೆ ಸುಪ್ರೀಂ ಕೋರ್ಟ್ ಸೂಚಿನೆ : ರಾಜೀನಾಮೆ ನೀಡಿದ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ

ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸದನದಲ್ಲಿ ವಿಶ್ವಾಸಮತ ಯಾಚನೆಗೂ ಮುನ್ನವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರ ರಾಜ್ಯಪಾಲರ ಸೂಚನೆಯಂತೆ ಗುರುವಾರ (ಜೂನ್‌ 30)ದಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಸದನದಲ್ಲಿ ವಿಶ್ವಾಸಮತ ಯಾಚನೆಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಅಲ್ಲದೇ ಜೈಲಿನಲ್ಲಿರುವ ಎನ್‌ಸಿಪಿ ನಾಯಕರಾದ ನವಾಬ್ ಮಲಿಕ್ ಮತ್ತು ಅನಿಲ್ ದೇಶ್‌ಮುಖ್‌ ಅವರಿಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಮತಿ ನೀಡಿತ್ತು. ಆದರೀಗ ವಿಶ್ವಸಮತಕ್ಕೂ ಮೊದಲೇ ಉದ್ಧವ್‌ ಠಾಕ್ರೆ ರಾಜೀನಾಮೆ ನೀಡಿ ಕೈಚೆಲ್ಲಿದ್ದಾರೆ.

ಕೋರ್ಟ್‌ ಹೇಳಿದ್ದೇನು?
ಗುರುವಾರ ಸಂಜೆ 5 ಗಂಟೆಯ ಒಳಗಾಗಿ ವಿಶ್ವಾಸಮತ ಸಾಬೀತು ಪಡಿಸಬೇಕು ಎಂದು ಮಹಾರಾಷ್ಟ್ರದ ಉದ್ಧವ್‌ ಠಾಕ್ರೆ ಸರ್ಕಾರಕ್ಕೆ ರಾಜ್ಯಪಾಲರು ನೀಡಿರುವ ಆದೇಶವನ್ನು ಪ್ರಶ್ನಿಸಿ ಶಿವಸೇನೆಯ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ ಈ ರೀತಿಯಾಗಿ ಹೇಳಿದೆ.
ಉದ್ಧವ್ ಠಾಕ್ರೆ ಸರ್ಕಾರ ಅಲ್ಪಮತಕ್ಕೆ ಜಾರಿದೆ. ಹೀಗಾಗಿ ಗುರುವಾರ ಸಂಜೆ ಐದು ಗಂಟೆಯ ಒಳಗಾಗಿ ವಿಶ್ವಾಸಮತ ಸಾಬೀತು ಮಾಡಬೇಕು ಎಂದು ರಾಜ್ಯಪಾಲ ಭಗತ್‌ ಸಿಂಗ್‌ ಕೊಶ್ಯಾರಿ ಆದೇಶ ನೀಡಿದ್ದರು. ಇದನ್ನು ಪ್ರಶ್ನೆ ಮಾಡಿ ಶಿವಸೇನೆಯ ಮುಖ್ಯಸಚೇತ ಸುನಿಲ್‌ ಪ್ರಭು ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸೂರ್ಯಕಾಂತ್‌ ಹಾಗೂ ನ್ಯಾ. ಜೆಬಿ ಪರ್ಡಿವಾಲ ಅವರಿದ್ದ ರಜಾಕಾಲದ ದ್ವಿಸದಸ್ಯ ಪೀಠ, ರಾಜ್ಯಪಾಲರ ಸೂಚನೆಯಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಉದ್ಧವ್‌ ಠಾಕ್ರೆ ಸರ್ಕಾರಕ್ಕೆ ಸೂಚನೆ ನೀಡಿತ್ತು. ವಿಶ್ವಾಸಮತ ಯಾಚನೆಯ ಫಲಿತಾಂಶವು ಸುಪ್ರೀಂ ಕೋರ್ಟ್ ಪ್ರಕರಣದ ಫಲಿತಾಂಶಕ್ಕೆ ಒಳಪಟ್ಟಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸ್ಪೀಕರ್ ಮತ್ತು ರಾಜ್ಯಪಾಲರ ಅಧಿಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಜುಲೈ 11 ರಂದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತ್ತು.

ಶಿವಸೇನೆಯ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನುಸಿಂಘ್ವಿ, ಗುರುವಾರವೇ ವಿಶ್ವಾಸಮತ ಸಾಬೀತು ಪಡಿಸಿದ್ದರೆ ಸ್ವರ್ಗವೇನೂ ಬಿದ್ದು ಹೋಗುವುದಿಲ್ಲ. ಜುಲೈ 11ರ ವರೆಗೆ ಶಾಸಕರನ್ನು ಅನರ್ಹತೆ ಮಾಡಕೂಡದು ಎಂದು ಮಧ್ಯದ್ಯಂತ ಆದೇಶ ಇದೆ. ಈವರೆಗೆ ಯಾಕೆ ಮುಂದೂಡಬಾರದು ಎಂದು ಸಿಂಘ್ವಿ ಕೋರಿಕೊಂಡರು.
ಒಂದು ವೇಳೆ ಶಾಸಕರನ್ನು ಅನರ್ಹತೆ ಮಾಡಿದ್ದೇ ಆದಲ್ಲಿ, ಅನರ್ಹತೆ ನೋಟಿಸ್‌ ನೀಡಿದ ದಿನದಿಂದ ಅವರು ಅನರ್ಹರಾಗುತ್ತಾರೆ. ಗುರುವಾರ ವಿಶ್ವಾಸಮತ ಯಾಚನೆ ನಡೆದು, ಬಳಿಕ ಅವರು ಅನರ್ಹರಾದರೆ, ವಿಶ್ವಾಸ ಮತ ಯಾಚನೆ ವೇಳೆ ಅವರು ಸದನದ ಸದಸ್ಯರಾಗಿರುವುದಿಲ್ಲ. ಇದು ಸಂವಿಧಾನದ ಧ್ಯೇಯೋದ್ದೇಶಗಳಿಗೆ ವಿರುದ್ಧವಾಗಿದ್ದು ಎಂದು ಸಿಂಘಿ ವಾದಿಸಿದರು.

ಏಕನಾಥ ಶಿಂಧೆ ಪರ ವಾದ ಮಂಡಿಸಿದ ಮತ್ತೋರ್ವ ಹಿರಿಯ ವಕೀಲ ನೀರಕ್‌ ಕಿಶನ್‌ ಕೌಲ್‌, ಅನರ್ಹತೆಗೆಗೂ ವಿಶ್ವಾಸಮತ ಸಾಬೀತು ಪಡಿಸುವುದಕ್ಕೂ ಸಂಬಂಧ ಇಲ್ಲ. ಸುಪ್ರಿಂ ಕೋರ್ಟ್‌ನ ಈ ಹಿಂದಿನ ತೀರ್ಪುಗಳು ಯಾವುದೂ ಇದಕ್ಕೆ ವಿರುದ್ಧವಾಗಿಲ್ಲ. ಉದ್ಧವ್‌ ಠಾಕ್ರೆ ಬಣಕ್ಕೆ ವಿಧಾನಸಭೆಯಲ್ಲಿ ಅಲ್ಲ. ಪಕ್ಷದಲ್ಲೇ ಬಹುಮತ ಇಲ್ಲ. ಪ್ರಜಾಪ್ರಭುತ್ವ ಸಂಭ್ರಮಿಸಬೇಕಾಗಿದ್ದು, ವಿಧಾನಸಭೆಯಲ್ಲಿ. ಅದನ್ನೇ ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಕೌಲ್‌ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button