ವಿಶ್ವದಲ್ಲೇ ಮೊದಲ ಬಾರಿಗೆ ಇಸ್ರೇಲ್‌ನ ವಿಜ್ಞಾನಿಗಳು “ಗರ್ಭಕೋಶದ ಹೊರಗೆ ಸಂಶ್ಲೇಷಿತ ಭ್ರೂಣ’ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಜೆರುಸಲೇಂ: ವೈದ್ಯಕೀಯ ವಿಜ್ಞಾನದಲ್ಲಿನ ಮಹತ್ವದ ಮೈಲುಗಲ್ಲು ಎಂಬಂತೆ, ವಿಶ್ವದಲ್ಲೇ ಮೊದಲ ಬಾರಿಗೆ ಇಸ್ರೇಲ್‌ನ ವಿಜ್ಞಾನಿಗಳು “ಗರ್ಭಕೋಶದ ಹೊರಗೆ ಸಂಶ್ಲೇಷಿತ ಭ್ರೂಣ’ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.
ವೀರ್ಯವಿಲ್ಲದೇ, ಫಲಿತ ಅಂಡಾಣುವಿಲ್ಲದೇ, ಗರ್ಭಕೋಶವೂ ಇಲ್ಲದೇ ಭ್ರೂಣವನ್ನು ಸೃಷ್ಟಿಸುವ ಮೂಲಕ ವಿಜ್ಞಾನಿಗಳು ಅಚ್ಚರಿ ಮೂಡಿಸಿದ್ದಾರೆ.
ವೃತ್ತಾಕಾರದ ಪಾರದರ್ಶಕ ಪಾತ್ರೆ ಯೊಂದರಲ್ಲಿ ಬೀಜ ಕೋಶ(ಸ್ಟೆಮ್ ಸೆಲ್)ಗಳನ್ನು ಬಳಸಿಕೊಂಡು ಕೃತಕವಾಗಿ ಇಲಿಯೊಂದರ ಭ್ರೂಣವನ್ನು ಸೃಷ್ಟಿಸಲಾಗಿದೆ. ವಿಶೇಷವೆಂದರೆ, ಯಾವುದೇ ಫಲಿತ ಅಂಡಾಣು ವನ್ನು ಬಳಸದೇ ಈ ಕೋಶಗಳನ್ನು ಅಭಿವೃದ್ಧಿಪಡಿಸುವ ಮೂಲಕ “ಭ್ರೂಣದ ಸೃಷ್ಟಿಗೆ ವೀರ್ಯದ ಅಗತ್ಯವಿಲ್ಲ’ ಎನ್ನುವುದನ್ನು ಈ ವಿಜ್ಞಾನಿಗಳು ಸಾರಿದ್ದಾರೆ. ಇಸ್ರೇಲ್‌ನ ವೈಸ್‌ಮನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸಂಶೋಧಕರು ಈ ಸಾಧನೆ ಮಾಡಿದ್ದಾರೆ.
ಅನುಕೂಲಗಳೇನು?: ಈ ಆವಿಷ್ಕಾರದಿಂದಾಗಿ ಮುಂದಿನ ದಿನಗಳಲ್ಲಿ ಇದೇ ಸಂಶ್ಲೇಷಿತ ಭ್ರೂಣ ಮಾದರಿ ಬಳಸಿ ಕೊಂಡು ಇತರೆ ಅಂಗಾಂಶಗಳನ್ನು ಅಭಿವೃದ್ಧಿಪಡಿಸಬಹುದು. ನಂತರ ಇದನ್ನು ಅಂಗಾಂಗ ಜೋಡಣಾ ಶಸ್ತ್ರಚಿಕಿತ್ಸೆಯಲ್ಲಿ ಬಳಸಬಹುದಾಗಿದೆ.
ಭ್ರೂಣ ಬೆಳೆದಿದ್ದು ಹೇಗೆ? :
ವಿದ್ಯುನ್ಮಾನ ನಿಯಂತ್ರಿತ ಸಾಧನವೊಂದರಲ್ಲಿ ಈ ಬೀಜಕೋಶಗಳನ್ನು ಇಡುವ ಮುನ್ನ, ಅವುಗಳನ್ನು ಸಂಶೋಧಕರು 3 ಗುಂಪುಗಳಾಗಿ ಪ್ರತ್ಯೇಕಿಸಿದ್ದರು. ಮೊದಲ ಗುಂಪನ್ನು ಇದ್ದ ಹಾಗೆಯೇ ಬಿಡಲಾಯಿತು. ಮತ್ತೆರಡು ಗುಂಪುಗಳನ್ನು 48 ಗಂಟೆಗಳ ಕಾಲ ಸಂಸ್ಕರಿಸಲಾಯಿತು. ನಂತರ ಎಲೆಕ್ಟ್ರಾನಿಕ್ ಸಾಧನದಲ್ಲಿ ಮೂರನ್ನೂ ಒಟ್ಟಿಗೆ ಮಿಶ್ರ ಮಾಡಿದಾಗ, ಬಹುತೇಕ ಕೋಶಗಳು ಸಮರ್ಪಕವಾಗಿ ಬೆಳೆಯಲಿಲ್ಲ. ಆದರೆ, ಸುಮಾರು ಶೇ.0.5ರಷ್ಟು ಅಂದರೆ 10 ಸಾವಿರದಲ್ಲಿ 50ರಷ್ಟು ಬೀಜಕೋಶಗಳು ಗೋಲಾಕೃತಿಗೆ ತಿರುಗಲು ಪ್ರಾರಂಭಿಸಿ, ನಂತರ ಭ್ರೂಣದ ಮಾದರಿಯ ರಚನೆಯಾಗಿ ಮಾರ್ಪಾಡಾದವು. ಭ್ರೂಣದ ಹೊರಪದರದಲ್ಲಿ ಹೊಕ್ಕುಳಬಳ್ಳಿ ಮತ್ತು ಪೊರೆಯ ಹಳದಿ ಚೀಲವೂ ಸೃಷ್ಟಿಯಾಗಿ ನೈಸರ್ಗಿಕ ಭ್ರೂಣದ ಆಕಾರವನ್ನು ಪಡೆದವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.