ವಿವಾದಿತ ವಾರಣಾಸಿಯ ಗ್ಯಾನ್‌ವಾಪಿ ಮಸೀದಿಯ ಬಾವಿಯಲ್ಲಿ 12 ಅಡಿ ಶಿವಲಿಂಗ ಪತ್ತೆ..?

ವಾರಣಾಸಿ (ಉತ್ತರ ಪ್ರದೇಶ): ಬನಾರಸ್‌ನಲ್ಲಿ ಇರುವ ಗ್ಯಾನ್‌ವಾಪಿ ಮಸೀದಿ ಸಮುಚ್ಛಯದಲ್ಲಿ ಶಿವಲಿಂಗ ಸಿಕ್ಕಿದೆ ಎಂದು ಹಿಂದೂ ಪರ ವಕೀಲರು ಪ್ರತಿಪಾದಿಸಿದ್ದಾರೆ.ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹಿಂದೂ ಪರ ವಕೀಲ ವಿಷ್ಣು ಜೈನ್ ಅವರು, ಗ್ಯಾನ್‌ವಾಪಿ ಮಸೀದಿ ಸಮುಚ್ಛಯದಲ್ಲಿ ಇರುವ ಬಾವಿಯೊಳಗೆ ಶಿವಲಿಂಗ ಪತ್ತೆಯಾಗಿದ್ದು, ಅದರ ರಕ್ಷಣೆ ಮಾಡಬೇಕು ಎಂದು ಸಿವಿಲ್ ಕೋರ್ಟ್‌ಗೆ ಮನವಿ ಮಾಡಿರೋದಾಗಿ ಹೇಳಿದ್ದಾರೆ.ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮತ್ತೊಬ್ಬ ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್ ಕೂಡಾ ಮಸೀದಿ ಸಮುಚ್ಛಯದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಈ ಶಿವಲಿಂಗವು ನಂದಿ ಮುಖ ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಕೋರ್ಟ್ ಆದೇಶದನ್ವಯ ಮಸೀದಿಯಲ್ಲಿ ಸರ್ವೆ ಕಾರ್ಯ ನಡೆಯುತ್ತಿದ್ದು, ವಿಡಿಯೋ ದೃಶ್ಯಾವಳಿಗಳನ್ನೂ ಚಿತ್ರೀಕರಣ ಮಾಡಲಾಗಿದೆ. ಇದೀಗ ಮಸೀದಿ ಆವರಣದ ಬಾವಿಯಲ್ಲಿ ಸಿಕ್ಕಿರುವ ಶಿವಲಿಂಗವು 12 ಅಡಿ ಎತ್ತರವಿದ್ದು, 8 ಇಂಚು ಸುತ್ತಳತೆ ಹೊಂದಿದೆ.ನ್ಯಾಯಾಲಯವೇ ನೇಮಕ ಮಾಡಿರುವ ತಜ್ಞರ ಸಮಿತಿಯು ಮಸೀದಿ ಆವರಣದಲ್ಲಿ ಇಂಚಿಂಚೂ ಪರಿಶೀಲನೆ ನಡೆಸುತ್ತಿದೆ. ಸಮಿತಿ ಸದಸ್ಯರ ರಕ್ಷಣೆಗಾಗಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭಾನುವಾರ ಸರ್ವೇ ಕಾರ್ಯ ಶೇ. 65ರಷ್ಟು ಮುಕ್ತಾಯಗೊಂಡಿತ್ತು. ಇದೀಗ ಸೋಮವಾರವೂ ಸರ್ವೇ ಮುಂದುವರೆದಿದೆ. ಮಂಗಳವಾರ ಅಡ್ವೋಕೇಟ್ ಕಮಿಷನರ್ ಅವರು ನ್ಯಾಯಾಲಯಕ್ಕೆ ಸರ್ವೆ ವರದಿಯನ್ನು ನೀಡಲಿದ್ದಾರೆ.ಭಾನುವಾರ ನಡೆದ ಸರ್ವೆ ವೇಳೆ ವಕೀಲರಾದ ಹರಿ ಶಂಕರ್ ಜೈನ್ ಹಾಗೂ ವಿಷ್ಣು ಜೈನ್ ಕೂಡಾ ಇದ್ದರು. ಮಸೀದಿಯಲ್ಲಿ ತನಿಖಾ ಸಮಿತಿಯು ಇಂಚಿಂಚೂ ಪರಿಶೀಲನೆ ನಡೆಸಿತು.

ಗ್ಯಾನ್‌ವಾಪಿ ಮಸೀದಿಯ ಪಶ್ಚಿಮ ಭಾಗದ ಗೋಡೆಯಲ್ಲಿ ಹಿಂದೂ ದೇಗುಲ ಧ್ವಂಸಗೊಳಿಸಿ ಗೋಡೆ ಕಟ್ಟಿದ ಕುರುಹುಗಳು ಇವೆ ಎಂದು ತಿಳಿದು ಬಂದಿದ್ದು, ವಿಡಿಯೋ ಹಾಗೂ ಫೋಟೋಗಳಲ್ಲೂ ಇದು ಸ್ಪಷ್ಟವಾಗಿ ಕಾಣಸಿಗುತ್ತಿದೆ ಎಂದು ವಕೀಲರು ತಿಳಿಸಿದ್ದಾರೆ.ಈ ಜಾಗದಲ್ಲಿ ಹಿಂದೆ ಹಿಂದೂ ದೇಗುಲ ಇತ್ತು, ಅದನ್ನು ಕೆಡವಿ ಮಸೀದಿ ಕಟ್ಟಲಾಗಿದೆ ಎಂಬುದಕ್ಕೆ ಇದೇ ಅತಿ ದೊಡ್ಡ ಸಾಕ್ಷಿ ಎಂದು ಹಿಂದೂ ಪರ ವಕೀಲರು ವಾದಿಸಿದ್ದಾರೆ. ಈ ಹಿಂದೆ ಶನಿವಾರ ನಡೆದ ಸರ್ವೆ ಕಾರ್ಯದ ವೇಳೆ ಮಸೀದಿ ಆವರಣದಲ್ಲಿ ಇದ್ದ ಮೂರು ಕೊಠಡಿಗಳ ಬಾಗಿಲು ತೆರೆಸಿ ಪರಿಶೀಲನೆ ಮಾಡಲಾಗಿತ್ತು.ಗ್ಯಾನ್‌ವಾಪಿ ಮಸೀದಿಯು ವಾರಣಾಸಿಯ ಕಾಶಿ ವಿಶ್ವನಾಥ ದೇಗುಲಕ್ಕೆ ಅಂಟಿಕೊಂಡಂತೆಯೇ ಇದೆ.

ಸದ್ಯ ಈ ಜಾಗದ ಕುರಿತಾಗಿ ಕಾನೂನು ಸಮರ ನಡೆಯುತ್ತಿದ್ದು, ವಾರಣಾಸಿ ನ್ಯಾಯಾಲಯವು ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆಗೆ ತನಿಖೆ ನಡೆಸುವಂತೆ ಆದೇಶಿಸಿತ್ತು. ಗ್ಯಾನ್‌ವಾಪಿ ಮಸೀದಿಯ ಕಟ್ಟಡವು ದೇಗುಲದ ಅವಶೇಷದ ಮೇಲೆ ನಿರ್ಮಾಣ ಆಗಿದೆಯೇ ಎಂಬುದನ್ನು ಪತ್ತೆ ಹಚ್ಚುವಂತೆ ತಿಳಿಸಿತ್ತು.ಮಸೀದಿ ಸಮುಚ್ಛಯದಲ್ಲಿ ಹಿಂದೂ ದೇಗುಲದ ಕುರುಹುಗಳಿವೆ ಎಂದು ಬಹಳ ಹಿಂದಿನಿಂದಲೂ ವಾದಿಸಲಾಗುತ್ತಿತ್ತು. ಇದರ ಸತ್ಯಾಸತ್ಯತೆ ತಿಳಿಯಲು ಇದೀಗ ನ್ಯಾಯಾಲಯ ಮುಂದಾಗಿದೆ.ಕಳೆದ ಏಪ್ರಿಲ್ 18, 2021ರಂದು ದಿಲ್ಲಿ ಮೂಲದ ಐವರು ಮಹಿಳೆಯರು ಗ್ಯಾನ್‌ವಾಪಿ ಮಸೀದಿಯ ಸತ್ಯಾಸತ್ಯತೆ ತಿಳಿಯುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ರಾಖಿ ಸಿಂಗ್, ಲಕ್ಷ್ಮೀ ದೇವಿ, ಸೀತಾ ಸಾಹು ಸೇರಿದಂತೆ ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯಲ್ಲಿ ಮಸೀದಿ ಆವರಣದ ಒಳಗೆ ಇರುವ ಮೂರ್ತಿಗಳ ಪೂಜೆಗೆ ಅನುಮತಿ ನೀಡುವಂತೆಯೂ ಕೇಳಲಾಗಿತ್ತು. ಮಸೀದಿಯ ಹೊರ ಗೋಡೆಯಲ್ಲಿ ಇಂದಿಗೂ ಕೂಡಾ ಹಿಂದೂ ದೇವತೆಗಳ ಮೂರ್ತಿಗಳು ಇದ್ದು, ಅವುಗಳಿಗೆ ಹಾನಿ ಮಾಡದಂತೆ ಮಸೀದಿ ಸಿಬ್ಬಂದಿಗೆ ತಾಕೀತು ಮಾಡುವಂತೆಯೂ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.