ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ : ಸುಧಾಕರ್

ವಿದೇಶಗಳಿಂದ ವಿಮಾನಗಳ ಮೂಲಕ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ಇಡಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಿದೆ.
ಅದರಂತೆ ಮಹಾರಾಷ್ಟ್ರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಎಚ್ಚರಿಕೆ ಕ್ರಮ ವಹಿಸಲಾಗಿದೆ ಎಂದರು.ರಾಜ್ಯದ ಮಂಗಳೂರು ಹಾಗೂ ದೇವನಹಳ್ಳಿಯ ನಾಡಪ್ರಭು ಕೆಂಪೇಗೌಡರ ಅಂತಾರಾಷ್ಟ್ರೀಯ ವಿಮಾನದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಎರಡೂ ನಿಲ್ದಾಣಗಳಲ್ಲಿ ಕೈಗೊಂಡಿರುವ ಕ್ರಮಗಳ ಪರಿಶೀಲನೆಯನ್ನು ಸದ್ಯದಲ್ಲಿಯೇ ಮಾಡಲಾಗುವುದು ಎಂದು ಹೇಳಿದರು.ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಆಸ್ಪತ್ರೆಗಳನ್ನು ಕೋವಿಡ್ ಹೊಸ ತಳಿ ತಡೆಯಲು ಸಜ್ಜುಗೊಳಿಸಲಾಗಿದೆ. ರಾಜ್ಯದಲ್ಲಿ ಮಾಸ್ಕ್ ಬಳಕೆ ಮಾಡಲಾಗುತ್ತಿದೆ. ಕೋವಿಡ್‍ನ ಹೊಸ ತಳಿ ಬಿಎಪ್.7 ಸೋಂಕು ಹರಡುವ ಪ್ರಮಾಣ ಹೆಚ್ಚಾಗಿದೆ.
ಆದರೆ, ಅದು ಉಂಟು ಮಾಡಲಿರುವ ಪರಿಣಾಮದ ತೀವ್ರತೆ ಅಷ್ಟಾಗಿಲ್ಲ.ಹಿರಿಯ ನಾಗರಿಕರು, ಇತರೆ ಆರೋಗ್ಯ ಸಮಸ್ಯೆ ಇರುವವರಲ್ಲಿ ಈ ವೈರಾಣುವಿನ ಸೋಂಕಿನ ತೀವ್ರತೆ ಹೆಚ್ಚಾಗಿರಲಿದೆ. ಹೀಗಾಗಿ ಹೆಚ್ಚು ಜನಜಂಗುಳಿ ಇರುವ ಕಡೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
ಅಂತಹ ಕಡೆಗಳಲ್ಲಿ ಹೋಗದಿರುವುದು ಒಳ್ಳೆಯದು ಎಂದು ತಿಳಿಸಿದರು.ಸಣ್ಣ ಮಕ್ಕಳು ಹಾಗೂ ಗರ್ಭಿಣಿಯರು ಹೆಚ್ಚು ಜಾಗರೂಕರಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.