ಅಪರಾಧ

ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ವಿದ್ಯಾರ್ಥಿ ಬಂಧನ

ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಟ್ವಿಟರ್ ಮೂಲಕ ಬೆದರಿಕೆ ಹಾಕಿದ್ದ ಬಿಟೆಕ್ ವಿದ್ಯಾರ್ಥಿಯನ್ನು ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಠಾಣಾ ಪೊಲೀಸರು ಬಂಧಿಸಿದ್ದಾರೆ.ಕೂಡ್ಲು ಗೇಟ್ ನಿವಾಸಿ ವೈಭವ್ ಗಣೇಶ್(20) ಬಂಧಿತ ಆರೋಪಿ.

ಈತನಿಂದ ಕೃತ್ಯಕ್ಕೆ ಬಳಸಿದ್ದ ರೆಡ್‍ಮಿ-9 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.ಆರೋಪಿ ವೈಭವ್ ಗಣೇಶ್ ಪಂಜಾಬ್‍ನಲ್ಲಿ ಬಿಟೆಕ್ ವ್ಯಾಸಂಗ ಮಾಡುತ್ತಿದ್ದು, ಇವರ ಪೋಷಕರು ಕೂಡ್ಲುಗೇಟ್ ಬಳಿ ವಾಸವಾಗಿದ್ದಾರೆ. ಡಿ. 10ರಂದು ರಾತ್ರಿ 10.15ರಲ್ಲಿ ಜನೆರಿಕ್ ಟ್ವೀಟ್‍ನಲ್ಲಿ ವ್ಯಕ್ತಿಯೊಬ್ಬ ನಾನು ಬೆಂಗಳೂರು ಏರ್‍ಪೋರ್ಟ್‍ನಲ್ಲಿ ಬಾಂಬ್ ಇಟ್ಟಿದ್ದು, ಅದು ಸ್ಪೋಟಗೊಂಡರೆ ಮರು ನಿರ್ಮಾಣವಾಗುತ್ತಿರುವ ನಗರಕ್ಕೆ ಬಾರಿ ಅನಾಹುತ ಸಂಭವಿಸುತ್ತದೆ ಎಂದು ಟ್ವೀಟ್ ಮಾಡಿದ್ದಾನೆ.

ಟ್ವೀಟರ್ ಗಮನಿಸಿದ ಟರ್ಮಿನಲ್ ಮ್ಯಾನೇಜರ್ ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.

ಈಶಾನ್ಯ ವಿಭಾಗದ ಡಿಸಿಪಿ ಮತ್ತು ದೇವನಹಳ್ಳಿ ಠಾಣೆಯ ಎಸಿಪಿ ಅವರು ಈಶಾನ್ಯ ವಿಭಾಗದ ಸಿಇಎನ್ ಪೊಲೀಸ್ ಠಾಣೆ ಹಾಗೂ ಏರ್‍ಪೆಪೊರ್ಟ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡವನ್ನು ನೇಮಿಸಿದ್ದರು.

ಈ ತಂಡ ಟ್ವಿಟರ್ ಮಾಡಿದ್ದ ವ್ಯಕ್ತಿಯ ಬಗ್ಗೆ ಹಲವು ಮಾಹಿತಿಗಳನ್ನು ಸಂಗ್ರಹಿಸಿ ಆತನನ್ನು ಪತ್ತೆ ಹಚ್ಚಿ ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಿ, ಕೃತ್ಯಕ್ಕೆ ಬಳಸಿದ್ದ ರೆಡ್‍ಮಿ-9 ಮೊಬೈಲ್ ವಶಪಡಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿರುತ್ತದೆ.

ಆರೋಪಿಯ ಮನೆಯಿಂದ ವಿಮಾನ ನಿಲ್ದಾಣಕ್ಕೆ ಹೋಗಲು ಬಹಳ ದೂರವಿರುವುದರಿಂದ ಈ ರೀತಿ ಬೆದರಿಕೆ ಹಾಕಿದರೆ ಸಮೀಪದಲ್ಲೆಲ್ಲಾದರೂ ವಿಮಾನ ನಿಲ್ದಾಣ ಮಾಡಬಹುದೆಂಬ ಆಲೋಚನೆಯಿಂದ ಟ್ವಿಟರ್‍ನಲ್ಲಿ ಬಾಂಬ್ ಬೆದರಿಕೆ ಹಾಕಿದ್ದಾಗಿ ವಿಚಾರಣೆ ವೇಳೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button