
ಚಾಲಕನ ತಪ್ಪು ನಿರ್ಧಾರದಿಂದ ವಿಧಾನ ಪರಿಷತ್‍ನ ಮಾಜಿ ಸದಸ್ಯರಾಗಿದ್ದ ವಿನಾಯಕ್ ಮೆಟೆ ನಿಧನರಾಗಿದ್ದಾರೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಆರೋಪಿಸಿದ್ದಾರೆ.
ಶಿವ್ ಸಂಗ್ರಾಮ್ ಪಕ್ಷದ ನಾಯಕ ವಿನಾಯಕ್ (52) ರಸ್ತೆ ಅಪಘಾತದಲ್ಲಿ ಈ ಹಿಂದೆ ಸಾವನ್ನಪ್ಪಿದ್ದರು.ಸೋಮವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ವರ್ಷ ಗಾಯಕ್‍ವಾಡ್ ಅವರು ಗಮನ ಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಿಸಿದರು.
ಅದಕ್ಕೆ ಉತ್ತರ ನೀಡಿದ ದೇವೇಂದ್ರ ಫಡ್ನಾವೀಸ್, ಮರಾಠ ಮೀಸಲು ಖೋಟಾ ನೀಡುವ ಸಂಬಂಧ ಚರ್ಚೆ ನಡೆಸಲು ರಾಜ್ಯ ಸರ್ಕಾರ ಆಗಸ್ಟ್ 14ರಂದು ರಾಯಗಡದಲ್ಲಿ ಸಭೆ ಕರೆದಿತ್ತು. ಅದರಲ್ಲಿ ಭಾಗವಹಿಸಲು ವಿನಾಯಕ್ ಸ್ವಂತ ಜಿಲ್ಲೆ ರಾಯಗಡದತ್ತ ಪ್ರಯಾಣಿಸುತ್ತಿದ್ದರು.
ಮದಪ್ ಸುರಂಗದ ಬಳಿ ಅಪಘಾತ ಸಂಭವಿಸಿದೆ ಎಂದಿದ್ದಾರೆ.ಚಾಲಕ ರಸ್ತೆ ಪಥವನ್ನು ಬದಲಾವಣೆ ಮಾಡಿ, ಮುಂದೆ ಚಲಿಸುತ್ತಿದ್ದ ಭಾರೀ ವಾಹನವನ್ನು ಹಿಂದಿಕ್ಕಲು ಯತ್ನಿಸಿದ್ದಾನೆ.
ಎಡಭಾಗದಿಂದ ಮಧ್ಯದಲ್ಲಿ ಮತ್ತೊಂದು ವಾಹನ ಚಲಿಸುತ್ತಿತ್ತು. ಅಲ್ಲಿ ಜಾಗವೇ ಇರಲಿಲ್ಲ. ಒವರ್‍ಟೆಕ್ ತೆಗೆದುಕೊಳ್ಳುವ ಚಾಲಕನ ನಿರ್ಧಾರವೇ ತಪ್ಪಾಗಿತ್ತು.
ವಿನಾಯಕ್ ಅವರು ಕುಳಿತಿದ್ದ ಭಾಗದಲ್ಲಿ ಕಾರು ಜಕ್ಕಂಗೊಂಡಿದೆ. ಚಾಲಕನ ಭಾಗದಲ್ಲಿ ಯಾವುದೇ ಹಾನಿಯಾಗಿಲ್ಲ. ಅಪಘಾತದಲ್ಲಿ ಗಾಯಗೊಂಡಿದ್ದ ವಿನಾಯಕ್ ಅವರು ಮೃತಪಟ್ಟಿದ್ದಾರೆ ಎಂದು ಹೇಳಿದರು. ಪ್ರತಿಪಕ್ಷಗಳು ವಿನಾಯಕ್ ಅವರ ಸಾವಿನ ಹಿನ್ನೆಲೆಯಲ್ಲಿ ಹಲವು ಅನುಮಾನಗಳನ್ನು ವ್ಯಕ್ತ ಪಡಿಸಿವೆ.