ರಾಜ್ಯ

ವಿಧವೆ ತಾಯಿಗೆ ಮೃತ ಮಗನ ಆಸ್ತಿಯಲ್ಲೂ ಸಮಾನ ಪಾಲು ಕೇಳುವ ಹಕ್ಕಿದೆ: ಹೈಕೋರ್ಟ್

ಬೆಂಗಳೂರು: ಪತಿಯ ನಿಧನದಿಂದ ವಿಧವೆಯಾಗಿರುವ ಪತ್ನಿಯು, ತನ್ನ ಪತಿಯ ಹೆಸರಿನಲ್ಲಿದ್ದ ಆಸ್ತಿಯನ್ನು ಮಕ್ಕಳಿಗೆ ಪಾಲು ಮಾಡುವಂಥ ಸಂದರ್ಭ ಬಂದಾಗ, ಗಂಡು ಮಕ್ಕಳಲ್ಲಿ ಯಾವುದೇ ಮಗ ಮೃತನಾಗಿದ್ದರೆ, ಆ ಮೃತ ಮಗನ ಪಾಲಿಗೆ ಬಂದಿರುವ ಆಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಹೇಳಿದೆ.ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಅನ್ವಯ, ಮೃತ ಮಗನಿಗೆ ಬಂದಿರುವ ಆಸ್ತಿಯನ್ನು ಆತನ ಪತ್ನಿ ಹಾಗೂ ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಬೇಕು.

ಅದರ ಜೊತೆಗೆ, ವಿಧವೆ ತಾಯಿಗೂ ಸಮಾನ ಹಂಚಿಕೆಯಾಗಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಜೊತೆಗೆ, ಈ ನಿಯಮ, ವಿಧವೆ ತಾಯಂದಿರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.ಇದು ಬೀದರ್ ನ ಹನುಮಂತ ರೆಡ್ಡಿ ಹಾಗೂ ಈರಮ್ಮ ಎಂಬ ದಂಪತಿ ಹಾಗೂ ಮಕ್ಕಳ ನಡುವಿನ ಆಸ್ತಿ ಹಂಚಿಕೆ ಪ್ರಕರಣವೊಂದರಲ್ಲಿ ನೀಡಲಾಗಿರುವ ತೀರ್ಪು.

ಹನುಮಂತ ರೆಡ್ಡಿ ಹಾಗೂ ಈರಮ್ಮ ದಂಪತಿಗೆ, ಪೊರಸರೆಡ್ಡಿ, ಭೀಮರೆಡ್ಡಿ, ರೇವಮ್ಮ ಹಾಗೂ ಬಸವರೆಡ್ಡಿ ಎಂಬ ನಾಲ್ಕು ಮಕ್ಕಳಿದ್ದು, ಇವರಲ್ಲಿ ಭೀಮರೆಡ್ಡಿ ಎಂಬುವರು ಮೃತಪಟ್ಟಿದ್ದಾರೆ. ಪತಿ ಹನುಮಂತ ರೆಡ್ಡಿಯೂ ಮೃತಪಟ್ಟಿದ್ದಾರೆ.

ಆಸ್ತಿ ಹಂಚಿಕೆ ವಿಚಾರದಲ್ಲಿ ತಾಯಿ, ಮಕ್ಕಳ ನಡುವೆ ಗೊಂದಲ ಏರ್ಪಟ್ಟ ಹಿನ್ನೆಲೆಯಲ್ಲಿ ಈ ವಿಚಾರ ಬೀದರ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ಅಲ್ಲಿ ಬಂದ ತೀರ್ಪು ಸಮಾಧಾನ ತರದ ಹಿನ್ನೆಲೆಯಲ್ಲಿ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಧವೆ ಪತ್ನಿಗೆ, ಪತಿಯ ಆಸ್ತಿಯಲ್ಲಿ ಆತನ ಪತ್ನಿಗೆ, ಮಕ್ಕಳಿಗೆ ಕೊಟ್ಟಂತೆ ಸಮಾನ ಪಾಲು ಕೊಡುವುದಿಲ್ಲ.

ಆದರೆ, ಆಸ್ತಿ ಹಂಚಿಕೆ ವೇಳೆ ಪತಿಯ ಪಾಲಿಗೆ ಬರಬೇಕಾದ ಆಸ್ತಿಯಲ್ಲಿ ಆಕೆಗೆ ಭಾಗಶಃ ಪಾಲು ನೀಡಲಾಗುತ್ತದೆ. ಇದರನ್ವಯ, ಈ ಪ್ರಕರಣದಲ್ಲಿ ಮೂರು ಹಂತದಲ್ಲಿ ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಪ್ರಕಾರ, ಆಸ್ತಿ ಹಂಚಿಕೆ ಮಾಡಬೇಕೆಂದು ಹೈಕೋರ್ಟ್ ಸೂಚಿಸಿದೆ.

ಮೊದಲ ಹಂತದಲ್ಲಿ, ಹನುಮಂತ ರೆಡ್ಡಿಯವರ ಆಸ್ತಿಯನ್ನು ಖುದ್ದು ಹನುಮಂತ ರೆಡ್ಡಿ ಹಾಗೂ ಅವರ ನಾಲ್ವರು ಮಕ್ಕಳು ಸೇರಿ 5 ಪಾಲು ಮಾಡಬೇಕು. ಅಲ್ಲಿಗೆ, ಖುದ್ದು ಹನುಮಂತ ರೆಡ್ಡಿ ಹಾಗೂ ನಾಲ್ವರು ಮಕ್ಕಳಿಗೆ ತಲಾ 1/5ರಷ್ಟು ಆಸ್ತಿ ಬರುತ್ತದೆ.ಎರಡನೇ ಹಂತದಲ್ಲಿ, ಹನುಮಂತ ರೆಡ್ಡಿಯವರಿಗೆ ಬಂದಿರುವ 1/ 5ರಷ್ಟು ಆಸ್ತಿಯನ್ನು ಆತನ ಪತ್ನಿ ಈರಮ್ಮ ಹಾಗೂ ಮಕ್ಕಳಿಗೆ ಸಮಾನವಾಗಿ ಪಾಲು ಮಾಡಬೇಕು.

ಆಗ, ಪ್ರತಿಯೊಬ್ಬರಿಗೂ 1/ 25ರಷ್ಟು ಆಸ್ತಿ ಸಿಗುತ್ತದೆ. ಅಲ್ಲಿಗೆ, ಪ್ರತಿಯೊಬ್ಬ ಮಕ್ಕಳಿಗೆ ಅವರ ಪಾಲಿಗೆ ಬಂದ 1/ 5 ಹಾಗೂ ಅಪ್ಪನ ಪಾಲಿನ ಆಸ್ತಿಯಿಂದ ಬಂದ 1/ 25ರಷ್ಟು ಆಸ್ತಿ ಸೇರಿ ಒಟ್ಟು 6/ 25ರಷ್ಟು ಆಸ್ತಿಗೆ ಹಕ್ಕುದಾರರಾಗುತ್ತಾರೆ.

ಮೂರನೇ ಹಂತದ ಆಸ್ತಿ ಹಂಚಿಕೆಯಡಿ, ದಿವಂಗತರಾಗಿರುವ ಭೀಮರೆಡ್ಡಿಗೆ ಬಂದಿರುವ 6/ 25ರಷ್ಟು ಆಸ್ತಿಯಲ್ಲಿ ಭೀಮರೆಡ್ಡಿ ಪತ್ನಿ, ಪುತ್ರಿಗೆ ಹಾಗೂ ವಿಧವೆ ಈರಮ್ಮನವರಿಗೆ ಸಮಾನವಾಗಿ ಹಂಚಿಕೆಯಾಗಬೇಕು. ಆಗ, ಈರಮ್ಮನವರಿಗೆ, ತನ್ನ ಪತಿಯ ಪಾಲಿಗೆ ಬಂದಿದ್ದ ಆಸ್ತಿಯಿಂದ ಬಂದಿರುವ ಭಾಗಶಃ ಆಸ್ತಿ ಹಾಗೂ ಪುತ್ರ ಭೀಮರೆಡ್ಡಿಯವರ ಪಾಲಿಗೆ ಬಂದಿದ್ದ ಆಸ್ತಿಯಲ್ಲಿನ ಭಾಗ ಸೇರಿ ಒಟ್ಟು 6/ 75ರಷ್ಟು ಆಸ್ತಿ ಸಿಗುತ್ತದೆ.

ಇದೇ ಮಾದರಿಯಲ್ಲೇ ವಿಧವೆ ಈರಮ್ಮನವರಿಗೆ ಆಸ್ತಿ ಹಂಚಿಕೆ ಮಾಡಬೇಕು ಎಂದು ಹೈಕೋರ್ಟ್ ಹೇಳಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button