ವಿದೇಶಿ ಪ್ರಜೆ ಇರಿದು ಬರ್ಬರ ಕೊಲೆ

ವಿದೇಶಿ ಪ್ರಜೆಯೊಬ್ಬರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ದಾರುಣ ಘಟನೆ ಅಮೃತಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದಾಸರಹಳ್ಳಿಯ ಮುನಿಕೆಂಪಣ್ಣ ಲೇಔಟ್ ಪ್ರದೇಶವೊಂದರಲ್ಲಿ ನೈಜೀರಿಯಾ ಪ್ರಜೆ ಅಸೋಲೋಮನ್ ಎಕೆನೆ(೩೮) ಎಂಬಾತನನ್ನು ಕೊಲೆ ಮಾಡಲಾಗಿದೆ.
ಮತ್ತೊಬ್ಬ ನೈಜೀರಿಯಾ ಪ್ರಜೆ ಓಬಿವರಾ ವಿಕ್ಟರ್ ಎಂಬಾತ ಅಸೋಲೋಮನ್ ಎಕೆನೆ ಯನ್ನು ಕೊಲೆ ಮಾಡಿ ಪರಾರಿಯಾಗಿದ್ದು ಆತನನ್ನು ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.ಆರೋಪಿ ವಿಕ್ಟರ್ ತನ್ನ ಪ್ರಿಯತಮೆಯೊಂದಿಗೆ ಸಹಜೀವನ (ಲಿವಿಂಗ್ ಟುಗೆದರ್) ನಡೆಸುತ್ತಿದ್ದು ಆಗಾಗ ರೂಮಿಗೆ ಬರುತ್ತಿದ್ದ ಸುಲೇಮಾನ್, ಆತನ ಗೆಳತಿಯ ಜೊತೆ ಸಲುಗೆಯಿಂದ ಇರುವುದನ್ನು ನೋಡಿದ್ದಾನೆ.
ಇದೇ ಕಾರಣಕ್ಕೆ ಜಗಳ ನಡೆದು ವಿಕೋಪಕ್ಕೆ ತಿರುಗಿ ಅಸೋಲೋಮನ್ ಎಕೆನೆ ಗೆ ವಿಕ್ಟರ್ ಓಬಿವರಾ ಅ. ೮ ರಂದು ಚಾಕುವಿನಿಂದ ಇರಿದು ಪರಾರಿಯಾಗಿದ್ದು ಗಂಭೀರವಾಗಿ ಗಾಯಗೊಂಡ ಅಸೋಲೋಮನ್ ಎಕೆನೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.ಪ್ರಕರಣ ದಾಖಲಿಸಿರುವ ಅಮೃತಹಳ್ಳಿ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.