ರಾಜ್ಯ

ವಿಜಯನಗರ: ಹಳ್ಳಿಗಳ ಅಭಿವೃದ್ಧಿಯೇ ಮಾಯ, ರಸ್ತೆಯಿಲ್ಲದೆ ಚರಂಡಿಯಲ್ಲಿಯೇ ಜನರ ಸಂಚಾರ..!

ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ’ ಎಂಬ ಕೇಂದ್ರ, ರಾಜ್ಯ ಸರಕಾರಗಳ ಘೋಷ ವಾಕ್ಯಗಳು ತಾಲೂಕಿನಲ್ಲಿ ಉಲ್ಟಾ ಹೊಡೆದಿವೆ. ಪ್ರತಿ ವರ್ಷ ಅಭಿವೃದ್ಧಿಯ ಹೆಸರಿನಲ್ಲಿ ಒಂದೊಂದು ಪಂಚಾಯಿತಿಗೆ ಕೋಟ್ಯಂತರ ರೂ.ಬಿಡುಗಡೆ ಮಾಡಲಿದೆ ಎಂಬ ಮಾಹಿತಿಯನ್ನು ಅಧಿಕೃತ ಆದೇಶ ಪತ್ರದಲ್ಲಿ ಮಾತ್ರ ಕಾಣಲಿದೆಯೇ ವಿನಃ ಅಭಿವೃದ್ಧಿಯಿಂದ ಮಾತ್ರ ಹಳ್ಳಿಗಳು ವಂಚಿತವಾಗಿವೆ ಎಂಬುದಕ್ಕೆ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಹರಪನಹಳ್ಳಿ ತಾಲೂಕಿನ ಹಳ್ಳಿಗಳೇ ಜ್ವಲಂತ ಸಾಕ್ಷಿಯಾಗಿ ಗೋಚರಿಸಿರುವ ಅಂಶ ಬೆಳಕಿಗೆ ಬಂದಿದೆ.

ಹೌದು, ತಾಲೂಕಿನ ಮತ್ತಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಎನ್‌.ಶೀರನಹಳ್ಳಿ ಹೊಸ ಕಾಲೋನಿ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಗ್ರಾಮಸ್ಥರು ಸುಸಜ್ಜಿತ ಚರಂಡಿ, ರಸ್ತೆಯಿಲ್ಲದೇ ನಿತ್ಯವೂ ಸಮಸ್ಯೆ ಎದುರಿಸುತ್ತಿದ್ದಾರೆ. ಕಾಲೊನಿಗಳ ಮನೆಗಳಿಂದ ಬರುವ ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ.

ಆಡಳಿತ ವರ್ಗ ಮೌನ:ಗುಂಡಿಯಲ್ಲಿ ನಿಂತ ನೀರು ಸರಾಗವಾಗಿ ಹರಿಯುತ್ತಿಲ್ಲ, ಹೀಗಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ತಗುಲುವ ಸಾಧ್ಯತೆ ಇದೆ. ಗ್ರಾಮಸ್ಥರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಗುಣಮಟ್ಟದ ರಸ್ತೆ, ಚರಂಡಿ ನಿರ್ಮಿಸಿ ಎಂದು ಬೇಡಿಕೊಂಡರೂ ಗ್ರಾ.ಪಂ. ತಾಲೂಕು ಆಡಳಿತ ಮೌನವಹಿಸಿವೆ.

ತಾಲೂಕಿನ ಮತ್ತಿಹಳ್ಳಿ ಗ್ರಾ.ಪಂ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಸಮಸ್ಯೆ ಇತ್ಯರ್ಥಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸ್ಥಳೀಯ ಪಂಚಾಯಿತಿ ಅಧಿಕಾರಿ ವರ್ಗ, ಆಡಳಿತ ಮಂಡಳಿಗಳು ನಿರಾಸಕ್ತಿ ವಹಿಸಿವೆ. ಆಲದಹಳ್ಳಿ, ಹಗರಿಶೀರನಹಳ್ಳಿ ಕುಡಿಯುವ ನೀರಿನ ಬವಣೆ ಸಮಸ್ಯೆಯಾಗಿ ಉಳಿದಿದೆ.

ಎನ್‌.ಶೀರನಹಳ್ಳಿ ಕ್ಯಾಂಪಿನಲ್ಲಿ ಸುಮಾರು 50 ಕುಟುಂಬಗಳು ಜೀವನ ಮಾಡುತ್ತಿದ್ದು, ಸುಮಾರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕುಡಿಯುವ ನೀರು, ಸಮರ್ಪಕ ಚರಂಡಿ, ಸಾರಿಗೆ ಸಮಸ್ಯೆಯಿದೆ. ಅಣಜಿಗೆರೆ ಗ್ರಾಪಂ ವ್ಯಾಪ್ತಿಯ ಮಾದಿಹಳ್ಳಿ ಗ್ರಾಮದ ಹೃದಯಭಾಗದ ಬೃಹದಾಕಾರದ ಚರಂಡಿಯಲ್ಲಿ ಮಳೆಯಿಂದಾಗಿ ನೀರು ಭರ್ತಿಯಾಗಿದ್ದು, ಸರಕಾರ ಚರಂಡಿ ಸ್ವಚ್ಛತೆಗೆ ಅನುದಾನ ಭರಿಸುತ್ತಿದ್ದರೂ ಚರಂಡಿ ಸ್ವಚ್ಛತೆಯಾಗಿಲ್ಲ! ಸಾರ್ವಜನಿಕರು ರಸ್ತೆಯಿಲ್ಲದೆ ಚರಂಡಿಯಲ್ಲಿಯೇ ಸಂಚರಿಸಬೇಕಾದ ದುಸ್ಥಿತಿಯಿದೆ.

ದಶಕಗಳಿಂದ ಸಮರ್ಪಕವಾಗಿ ಚರಂಡಿ ನಿರ್ಮಾಣ ಮಾಡದೆ ಅವೈಜ್ಞಾನಿಕ ಯೋಜನೆಗಳಿಂದ ಮಳೆಗಾಲದಲ್ಲಿ ರಸ್ತೆ ದಾಟಲು ಹರಸಾಹಸ ಪಡಬೇಕಿದೆ. ನೆರೆಹೊರೆಯ ವಸತಿ ಮನೆಗಳಲ್ಲಿ ಕುಟುಂಬಸ್ಥರು ಸೊಳ್ಳೆಗಳ ಹಾವಳಿಗೆ ತತ್ತರಿಸಿದ್ದಾರೆ. ದುರ್ವಾಸನೆಗೆ ಬೇಸತ್ತು ಹೋಗಿದ್ದು, ಇಷ್ಟಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಸ್ಥಳಕ್ಕೆ ಭೇಟಿ ನೀಡದೆ ಇರುವುದು ಸಾರ್ವಜನಿಕರ ಆಕ್ರೊಶಕ್ಕೆ ಕಾರಣವಾಗಿದೆ.

ಇನ್ನು ಅರಸಿಕೇರಿ ಹೋಬಳಿಯ ಮಾದಿಹಳ್ಳಿ ಗ್ರಾಮದಲ್ಲಿ ನೂರಾರು ಕುಟುಂಬಗಳು ವಾಸವಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇಲ್ಲಿ ಚರಂಡಿ ವ್ಯವಸ್ಥೆ ದೊಡ್ಡ ಸಮಸ್ಯೆಯಾಗಿದೆ. ಗ್ರಾಮದ ಕೋಟೆ ಬಾಗಿಲಿನಲ್ಲಿ ಚರಂಡಿಯ ದುಃಸ್ಥಿತಿಯಿದ್ದು, ನಿವಾರಣೆ ಯಾವಾಗ ಎನ್ನುವುದು ತಿಳಿಯದಾಗಿದೆ. ಚರಂಡಿಗಳ ತುಂಬಾ ಹೂಳು ತುಂಬಿದ್ದು, ಹಲವು ವರ್ಷಗಳಿಂದ ಸ್ವಚ್ಛತೆ ಇಲ್ಲದೆ ಒಂದೇ ಕಡೆ ನೀರು ಶೇಖರಣೆಯಾಗಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಮಿಕ ರೋಗದ ಭೀತಿ ಕಾಡುತ್ತಿದೆ.

ಚರಂಡಿ ಅಂಚಿನಲ್ಲಿ ಹತ್ತಾರು ಕುಟುಂಬಗಳು ನೆಲೆಸಿದ್ದು, ಗ್ರಾಮದ ಕೋಟೆ ಕೆಳಭಾಗದಿಂದ ಜಾಮೀಯಾ ಮಸೀದಿಯವರೆಗೆ ಸಾಕಷ್ಟು ಚರಂಡಿ ನೀರು ಸಂಗ್ರಹಣೆಯಾಗಿ ಸೊಳ್ಳೆಗಳ ತಾಣವಾಗಿದೆ. ಈ ಬಗ್ಗೆ ಹಲವಾರು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗ್ರಾ.ಪಂ ಸದಸ್ಯರು ಚುನಾವಣೆ ಸಂದರ್ಭದಲ್ಲಿ ಗೆಲ್ಲುವವರೆಗೆ ಮಾತ್ರ ಭರವಸೆ ನೀಡಿ ನಂತರ ಮೌನವಹಿಸುತ್ತಾರೆ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಕಾಲೊನಿಯಲ್ಲಿ ಸರಕಾರಿ ಶಾಲೆಯ ಪಕ್ಕದಲ್ಲಿಯೇ ಹಾದು ಹೋಗುವ ದಾರಿಯಾಗಿದ್ದು, ವಿದ್ಯಾರ್ಥಿಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಬಗ್ಗೆ ಗ್ರಾ.ಪಂಗೆ ಮೌಖಿಕವಾಗಿ ಹಲವು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ. ಈ ರಸ್ತೆಯಲ್ಲಿ ಹೋಗಲು ಜನ ಹಿಂಜರಿಯುತ್ತಿದ್ದಾರೆ. ಬಿದ್ದು ಅನಾಹುತಗಳನ್ನು ಅನುಭವಿಸಿದ್ದಾರೆ. ದ್ವಿಚಕ್ರ ವಾಹನಗಳ ಸಂಚಾರಕ್ಕೂ ಸಮಸ್ಯೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮತ್ತಿಹಳ್ಳಿ ಕಾಲೋನಿಗೆ ಭೇಟಿ ನೀಡಿ ಚರಂಡಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಲಾಗುವುದು. ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಮತ್ತಿಹಳ್ಳಿ ಗ್ರಾ.ಪಂ ಅಧ್ಯಕ್ಷ ನಾಗವೇಣಿ ಬಸವರಾಜ್‌ ಭರವಸೆ ನೀಡಿದ್ರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button