ರಾಜಕೀಯರಾಷ್ಟ್ರಿಯ

ವಿಚಾರಣೆಗೆ ರಾಹುಲ್ ಹಾಜರಾದಾಗ ಇಡಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಸಜ್ಜು..!

ಹೊಸದಿಲ್ಲಿ: ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದಿಂದ ಸಮನ್ಸ್ ಪಡೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಂಬರುವ ಸೋಮವಾರ(ಜೂನ್-13) ವಿಚಾರಣೆಗೆ ಹಾಜರಾಗಬೇಕಿದೆ. ಈ ಮಧ್ಯೆ ಇಡಿ ವಿಚಾರಣೆಯನ್ನು ಕೇಂದ್ರ ಸರ್ಕಾರದ ರಾಜಕೀಯ ದ್ವೇಷದ ಫಲಿತಾಂಶ ಎಂದು ಜರೆದಿರುವ ಕಾಂಗ್ರೆಸ್, ಅದೇ ದಿನ ಬೃಹತ್ ಪ್ರತಿಭಟನೆಗೆ ಸಜ್ಜಾಗುತ್ತಿದೆ.
ರಾಹುಲ್ ಗಾಂಧಿ ಇಡಿ ವಿಚಾರಣೆ ದಿನವೇ ಶಕ್ತಿ ಪ್ರದರ್ಧನಕ್ಕೆ ಮುಂದಾಗಿರುವ ಕಾಂಗ್ರೆಸ್, ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿಯ ಮುಂಭಾಗದಲ್ಲಿ, ಭಾರೀ ಪ್ರತಿಭಟನೆ ಹಮ್ಮಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಈ ಪ್ರತಿಭಟನೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರು, ಸಂಸದರು ಭಾಗಿಯಾಗಲಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ಈ ನಾಯಕರು ಇಡಿಯತ್ತ ಹೆಜ್ಜೆ ಹಾಕಲಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.

ಇದೇ ಪ್ರಕರಣದಲ್ಲಿ ಇಡಿಯಿಂದ ಸಮನ್ಸ್ ಪಡೆದಿರುವ ಸೋನಿಯಾ ಗಾಂಧಿ, ಕೊರೊನಾ ವೈರಸ್ ಸೋಂಕು ತಗುಲಿರುವ ಕಾರಣಕ್ಕೆ ವಿಚಾರಣೆ ದಿನಾಂಕವನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಸೋಮವಾರ ರಾಹುಲ್ ಗಾಂಧಿ ಮಾತ್ರ ವಿಚಾರಣೆಗೆ ಹಾಜರಾಗಲಿದ್ದಾರೆ.


ಈ ಮೊದಲು ಜೂನ್ 2ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ತಾವು ವಿದೇಶ ಪ್ರವಾಸ ಮಾಡಬೇಕಿರುವ ಕಾರಣ, ವಿಚಾರಣಾ ದಿನಾಂಕವನ್ನು ಮುಂದೂಡುವಂತೆ ರಾಹುಲ್ ಗಾಂಧಿ ಕೋರಿದ್ದರು. ರಾಹುಲ್ ಅವರ ಮನವಿಯನ್ನು ಪುರಸ್ಕರಿಸಿದ್ದ ಇಡಿ, ಜೂನ್ 13ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು.

ಅದರಂತೆ ಇದೇ ಸೋಮವಾರ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಬೇಕಿದ್ದು, ಅದೇ ದಿನ ಇಡಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.

ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿರುವುದನ್ನು, ಕಾಂಗ್ರೆಸ್ ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಉದಾಹರಣೆ ಎಂದು ಆರೋಪಿಸಿದೆ. ವಿರೋಧಿಗಳನ್ನು ನೇರವಾಗಿ ಎದುರಿಸಲಾಗದ ಬಿಜೆಪಿ, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಶಕ್ತಿ ಕುಂದಿಸುವ ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.


ಒಟ್ಟಿನಲ್ಲಿ ರಾಹುಲ್ ಗಾಂಧಿ ಅವರು ಇಡಿ ವಿಚಾರಣೆಗೆ ಹಾಜರಾಗುವ ದಿನವೇ, ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿರುವುದು ಕುತೂಹಲ ಕೆರಳಿಸಿದೆ.

Related Articles

Leave a Reply

Your email address will not be published. Required fields are marked *

Back to top button