ವಾಣಿಜ್ಯ ಕಟ್ಟಡ ಯೋಜನೆ ವಿರುದ್ಧ ಹೋರಾಟ

ಕೆ.ಆರ್.ಪುರ ಸಂತೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹುಮಹಡಿ ವಾಣಿಜ್ಯ ಕಟ್ಟಡ ಯೋಜನೆಯಿಂದ ರೈತರಿಗೆ ಹಾಗೂ ವ್ಯಾಪಾರಿಗಳಿಗೆ ತೊಂದರೆಯಾಗಲಿದ್ದು,ಯೋಜನೆಯನ್ನು ಕೈಬಿಡದಿದ್ದರೆ ಕಾನೂನು ಹೋರಾಟ ಮಾಡಲಾಗುವುದೆಂದು ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಎಚ್ಚರಿಸಿದರು.
ಕೆ.ಆರ್.ಪುರದಲ್ಲಿ ರೈತರು, ವ್ಯಾಪಾರಿಗಳ ಸಭೆಯಲ್ಲಿ ಭಗವಹಿಸಿ, ಅಹವಾಲು ಆಲಿಸಿ ಮಾತನಾಡಿದರು.ಬಹುಮಹಡಿ ಕಟ್ಟಡದ ನಿರ್ಮಾಣದಿಂದ ರೈತರಿಗೆ ಹಾಗೂ ವ್ಯಾಪಾರಿಗಳಿಗೆ ಹೆಚ್ಚು ತೊಂದರೆಯಾಗಲಿದೆ ಹಾಗೂ ನೂರಾರು ವ್ಯಾಪಾರಿಗಳು ಯೋಜನೆಯಿಂದ ಬೀದಿಗೆ ಬೀಳಲಿದ್ದಾರೆ ಎಂದು ಆರೋಪಿಸಿದರು.ಮೇಲ್ನೋಟಕ್ಕೆ ಸಂತೆ ವಿಚಾರದಲ್ಲಿ ರೈತರಿಗೆ ಬಿಬಿಎಂಪಿ, ಪೊಲೀಸರಿಂದ ದೌರ್ಜನ್ಯ ಹೆಚ್ಚಾಗಿದೆ.
ರೈತರ ಹಿತ ರಕ್ಷಣೆಗೆ ಕಾನೂನು ಹೋರಾಟ ಮಾಡುತ್ತೇವೆ. ಹೋರಾಟದಿಂದ ಹಿಂದೆ ಸರಿಯುವುದಿಲ್ಲ‘ ಎಂದರು.’ಸಂತೆ ಮೈದಾನದಲ್ಲಿ ೨೦೦೮ರಲ್ಲಿ ನಂದೀಶ್ ರೆಡ್ಡಿ ಶಾಸಕರಾಗಿದ್ದಾಗ ೧೫೦ ಕೋಟಿ ರೂ. ವೆಚ್ಚದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲು ಹೊರಟಿದ್ದಾಗ ಹಲವು ಹೋರಾಟ ಮಾಡಿ ಸಂತೆ ಜಾಗ ಉಳಿಸಿಕೊಂಡಿದ್ದೇವೆ. ಮತ್ತೆ ಕಟ್ಟಡ ನಿರ್ಮಿಸಲು ಯೋಜನೆ ತಂದಿದ್ದಾರೆ.
ಇದರಿಂದ ಹಣ್ಣು ಮತ್ತು ತರಕಾರಿ, ಹೂವಿನ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೊಂದರೆಯಾಗಲಿದೆ’ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳ ಅಧ್ಯಕ್ಷ ಬಾಬು ಸಂತೆ ಅಭಿವೃದ್ಧಿಗೊಳಿಸಿ ಮೂಲಸೌಕರ್ಯಗಳನ್ನು ಕಲ್ಪಿಸುವುದನ್ನು ಬಿಟ್ಟು, ಬಹುಮಹಡಿ ಕಟ್ಟಡದ ನಿರ್ಮಾಣದ ಯೋಜನೆ ನೆಪದಲ್ಲಿ ರೈತರು ಮತ್ತು ವ್ಯಾಪಾರಿಗಳನ್ನು ಹೊರದಬ್ಬುವ ಹುನ್ನಾರ ನಡೆಯುತ್ತಿದೆ ’ಕಾನೂನು ಹೋರಾಟ ಮೂಲಕ ಸಂತೆ ಉಳಿಸಿಕೊಳ್ಳುತ್ತೇವೆ‘ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಟಿ. ರಾಜ್‌ಕುಮಾರ್, ಅಂಜನಮೂರ್ತಿ, ಪ್ರಕಾಶ್ ಇದ್ದರು.