ವರುಣನ ಅಬ್ಬರ ರಾಜ್ಯ ತತ್ತರ

ಜನಜೀವನ ಅಸ್ತವ್ಯಸ್ತ ರಾಜ್ಯದ ಬಹುತೇಕ ಭಾಗಗಳಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಅದರಲ್ಲೂ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆಯನ್ನು ವಿಸ್ತರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.ನಿರಂತರವಾಗಿ ಮಳೆ ಸುರಿದಿದ್ದರಿಂದ ಕಳೆದ ರಾತ್ರಿ ಭೂಕುಸಿತ ಸಂಭವಿಸಿದೆ.
ಮೃತಪಟ್ಟ ಕಾರ್ಮಿಕರನ್ನು ಕೊಟ್ಟಾಯಂನ ಬಾಬು, ಪಾಲಕಾಡು ನಿವಾಸಿ ಬಿಜು, ಅಲಪೊಳದ ಸಂತೋಷ್ ಎಂದು ಗುರುತಿಸಲಾಗಿದೆ. ಕಣ್ಣೂರಿನ ಜಾನಿ ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಸುದ್ದಿ ತಿಳಿಯುತ್ತಿದ್ದಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂವರು ಗಾಯಾಳು ಕಾರ್ಮಿಕರನ್ನು ಅವಶೇಷಗಳ ಅಡಿಯಿಂದ ಹೊರ ತೆಗೆಯಲಾಗಿದೆ.
ಈ ತಿಂಗಳ ೯ರವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಡಲ ಕೊರತಗಳು ಉಂಟಾಗಿವೆ. ಹಲವು ಗ್ರಾಮಗಳು ಜಲಾವೃತಗೊಂಡು ಸಂಪರ್ಕ ಕಡಿದು ಹೋಗಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ಕಾರವಾರದಲ್ಲಿ ಮಳೆಯ ಅಬ್ಬರಕ್ಕೆ ಜನ ನಲುಗಿ ಹೋಗಿದ್ದಾರೆ.ಮಂಗಳೂರು ವಿಮಾನನಿಲ್ದಾಣದ ರನ್ ವೇ ಬಳಿಯ ರಸ್ತೆ ಕುಸಿದಿದ್ದು ಆತಂಕಕ್ಕೆ ಕಾರಣವಾಗಿದೆ.ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮಳೆ ಪ್ರಮಾಣ ತಗ್ಗಿಲ್ಲ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲೂ ಮುಂದಿನ ೨ ದಿನಗಳ ಕಾಲ ಮಳೆ ಬಿರುಸು ಪಡೆದುಕೊಳ್ಳುವ ಸಾಧ್ಯತೆ ಇದ್ದು, ಎಲ್ಲೊ ಅಲರ್ಟ್ ಘೋಷಿಸಲಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು, ಆಲೂರು, ಸಕಲೇಶಪುರ ತಾಲ್ಲೂಕುಗಳಲ್ಲಿ ಶಾಲೆಗಳಿಗೆ ಮಾತ್ರ ರಜೆ ನೀಡಲಾಗಿದ್ದು, ಕಾಲೇಜು ತರಗತಿಗಳು ಎಂದಿನಂತೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲೂ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಮುಂದಿನ ೪ ದಿನಗಳ ಕಾಲ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ ಹಾಗೂ ಸೊರಬ ತಾಲ್ಲೂಕಿನ ಶಾಲೆಗಳಿಗೆ ರಜೆ ನೀಡಲಾಗಿದ್ದು, ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ.
ಮಳೆಯಿಂದಾಗಿ ಗಾಜನೂರಿನ ತುಂಗಾ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಜಲಾಶಯದಿಂದ ನದಿಗೆ ೪೫.೯೫೯ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಇದರಿಂದಾಗಿ ತುಂಗಾನದಿ ಭೋರ್ಗರೆಯುತ್ತಿದೆ.ಮಳೆ ಹಿನ್ನೆಲೆಯಲ್ಲಿ ತಾಲ್ಲೂಕಿನ ದಂಡಾಧಿಕಾರಿಗಳಿಗೆ ತಾಲ್ಲೂಕು ಕೇಂದ್ರದಲ್ಲೇ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಯಾವುದೇ ಸಮಸ್ಯೆ ಎದುರಿಸಲು ತಂಡ ರಚನೆ ಮಾಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ತಹಶೀಲ್ದಾರ್‌ಗೆ ಸೂಚನೆ ನೀಡಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆ ಮುಂದುವರೆದಿದೆ. ಜಿಲ್ಲಾಡಳಿತ ಮೂಡಿಗೆರೆ, ಕಳಸ, ಎನ್‌ಆರ್ ಪುರ, ಕೊಪ್ಪ, ಶೃಂಗೇರಿ ತಾಲ್ಲೂಕಿನ ಶಾಲೆಗಳಿಗೆ ಜು. ೯ರವರೆಗೆ ರಜೆ ನೀಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಕಡಿಮೆಯಾಗಿಲ್ಲ. ಹೀಗಾಗಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಗಾಳಿಬೀಡು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ೧೫ ಸೆ.ಮೀ ಮಳೆಯಾಗಿದೆ. ಕಂದಾಯ ಸಚಿವ ಆರ್. ಅಶೋಕ್ ಜಿಲ್ಲೆಯಲ್ಲಿ ಠಿಕಾಣಿ ಹೂಡಿದ್ದಾರೆ. ಮಣ್ಣು ಕುಸಿದಿರುವ, ಪದೇ ಪದೇ ಭೂಮಿ ಕಂಪಿಸುವ ಚೆಂಬು ಸೇರಿದಂತೆ ಇತರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾರಂಗಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ೧೫,೫೮೦ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗುತ್ತಿದೆ.ಉತ್ತರ ಒಳನಾಡಿನ ಬೆಳಗಾವಿ ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೀದರ್, ಕಲಬುರಗಿ ಜಲ್ಲೆಗಳಲ್ಲಿ ನಾಳೆ ಮಳೆಯಾಗುವ ನಿರೀಕ್ಷೆ ಇದೆ.
ಬೆಂಗಳೂರಲ್ಲೂ ಮಳೆಉದ್ಯಾನನಗರಿ ಬೆಂಗಳೂರಿನಲ್ಲಿ ನಿನ್ನೆಯಿಂದ ಮೋಡ ಕವಿದ ವಾತಾವರಣ ಮುಂದುವರಿದಿದೆ. ಬಿರುಸಿನ ಗಾಳಿಯ ಜತೆ ಚಳಿಯೂ ಹೆಚ್ಚಾಗಿದೆ.ಬೆಳಿಗ್ಗೆಯಿಂದಲೂ ನಿರಂತರ ಮಳೆ ಬೀಳುತ್ತಿದೆ. ಪೀಣ್ಯ, ಕೈಗಾರಿಕೆ, ಶ್ರೀರಾಮಪುರ, ಜಾಲಹಳ್ಳಿ, ಗೊರಗುಂಟೆಪಾಳ್ಯ, ಬಿಇಎಲ್, ವಿದ್ಯಾರಣ್ಯಪುರ, ಕೊಮ್ಮಗೊಂಡನಹಳ್ಳಿ ಪ್ರದೇಶದಲ್ಲಿ ಮಳೆ ಸುರಿಯುತ್ತಿದೆ.ಕೆಲವೆಡೆ ಜಿಟಿಜಿಟಿ ಮಳೆಯಿಂದಾಗಿ ಜನಜೀವನ ಏರುಪೇರಾಗಿದೆ. ಕಚೇರಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ತೆರಳುವವರು ಕಿರಿಕಿರಿ ಅನುಭವಿಸಬೇಕಾಯಿತು.
ಮಳೆ ಪೀಡಿತ ಪ್ರದೇಶಗಳಲ್ಲಿಪರಿಹಾರ ಕಾರ್‍ಯ ಚುರುಕುರಾಜ್ಯದ ಕೆಲ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಸುರಕ್ಷತೆ ಮತ್ತು ಪರಿಹಾರ ಕಾರ್ಯಗಳು ಭರದಿಂದ ನಡೆದಿವೆ. ಮಳೆಪೀಡಿತ ಪ್ರದೇಶಗಳಲ್ಲಿ ಕಂದಾಯ ಸಚಿವ ಆರ್. ಅಶೋಕ್ ಪ್ರವಾಸ ಕೈಗೊಂಡಿದ್ದಾರೆ. ಜಿಲ್ಲಾಧಿಕಾರಿಗಳಿಗೂ ಮಳೆಯಿಂದ ತೊಂದರೆಗೊಳಗಾಗಿರುವ ಸ್ಥಳಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ೩-೪ ದಿನ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಾಗಾಗಿ, ಇಲ್ಲೆಲ್ಲ ಎಚ್ಚರವಹಿಸಿದ್ದೇವೆ. ಕಂದಾಯ ಸಚಿವ ಆರ್. ಅಶೋಕ್, ಕೊಡಗು ಪ್ರವಾಸದಲ್ಲಿದ್ದಾರೆ ಎಂದರು.ಕಾರವಾರ, ಮಂಗಳೂರುಗಳಲ್ಲಿ ಕಡಲ ಕೊರೆತ ಆಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಮಳೆಪೀಡಿತ ಸ್ಥಳಕ್ಕೆ ತೆರಳುವಂತೆಯೂ ತಿಳಿಸಿದ್ದೇನೆ ಎಂದರು.ಮಳೆ ಪರಿಹಾರ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇದೆ ಎಂದರು.