ವರುಣನ ಅಬ್ಬರ ಕೊಪ್ಪಳದಲ್ಲಿ ಸಿಡಿಲು ಬಡಿದು ಯುವಕ ಸಾವು

ಕೆಲ ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೇ ತನ್ನ ಅಬ್ಬರವನ್ನು ಮುಂದುವರಿಸಿದ್ದಾನೆ. ಉತ್ತರ ಕರ್ನಾಟಕದ ಬೆಳಗಾವಿ, ಗದಗ, ಹುಬ್ಬಳ್ಳಿ -ಧಾರವಾಡ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಹಲವೆಡೆ ಸೇತುವೆಗಳು ಮುಳುಗಡೆಯಾಗಿವೆ.
ಕೊಪ್ಪಳದಲ್ಲಿ ಸಿಡಿಲು ಬಡಿದು ಯುವಕ ಸಾವನ್ನಪ್ಪಿದ್ದಾನೆ.ಧಾರಾಕಾರ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ಜನರು ಪರದಾಡುವಂತಾಗಿದೆ. ಬಳ್ಳಾರಿ ಜಿಲ್ಲೆಯ ಸಿರಾಗುಪ್ಪ ತಾಲ್ಲೂಕಿನಲ್ಲಿ ಭಾರಿ ಮಳೆಯಿಂದಾಗಿ ಬೆಳಗಲ್ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಜಲಾವೃತಗೊಂಡಿದೆ.
ಇದರಿಂದಾಗಿ ದವಸಧಾನ್ಯಗಳು ನೀರು ಪಾಲಾಗಿವೆ.ಗದಗ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಸಂಭವಿಸ ಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ. ಉಕ್ಕಿ ಹರಿಯುತ್ತಿದ್ದ ಸೇತುವೆ ಮೇಲೆ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಲಾರಿ ಕೂದಲೆಳೆ ಅಂತರದಲ್ಲಿ ಪಾರಾಗಿದೆ.
ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿ ಗ್ರಾಮದ ಬನಶಂಕರಿ ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ನಿಂತಿದ್ದ ಏಳೆಂಟು ಮಂದಿ ಪ್ರಾಣಪಾಯದಿಂದಿ ಪಾರಾಗಿದ್ದಾರೆ.ಕೊಪ್ಪಳ ತಾಲ್ಲೂಕಿನ ಕಾಟ್ರಳ್ಳಿ ಬಳಿ ಸಿಡಿಲು ಬಡಿದು ೨೩ ವರ್ಷದ ಯುವಕ ಸಾವನ್ನಪ್ಪಿದ್ದಾನೆ.
ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಹುಬ್ಬಳ್ಳಿ ತಾಲ್ಲೂಕಿನಾದ್ಯಂತ ಸುರಿದ ವರ್ಷಧಾರೆಯಿಂದಾಗಿ ಹಳ್ಳ-ಕೊಳ್ಳ ಉಕ್ಕಿ ಹರಿಯುತ್ತಿದ್ದು, ಸಂಶಿ-ಚಾಕಲಬ್ಬಿ ನಡುವೆ ಬಸ್‌ನಲ್ಲೇ ಪ್ರಯಾಣಿಕರು ಕಾಲಕಳೆಯಬೇಕಾಯಿತು.
ಬೆಳಗಾವಿ ಜಿಲ್ಲೆಯಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಥಣಿ ತಾಲ್ಲೂಕಿನ ಹಳ್ಳ-ಕೊಳ್ಳಗಳು ಭರ್ತಿಯಾಗಿವೆ. ಇದರಿಂದಾಗಿ ಹಳ್ಳ ದಾಟಲು ಗ್ರಾಮಸ್ಥರು ಪರದಾಡುವಂತಾಗಿದೆ. ಮಳೆಯಿಂದಾಗಿ ದೋಣಿ ಹಳ್ಳದ ತಾತ್ಕಾಲಿಕ ಸೇತುವೆ ಕುಸಿದು ಬಿದ್ದಿದೆ.
ಇದರಿಂದಾಗಿ ನಾಗರಿಕರಿಗೆ ತೀವ್ರ ತೊಂದರೆಯಾಗಿದೆ.ವಿಜಯಪುರ, ಕರ್ಲ್ಬುಗಿ, ಬೀದರ್, ಚಿತ್ರದುರ್ಗ ಭಾಗದಲ್ಲೂ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮಲೆನಾಡು ಭಾಗದಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನದಿ ತೀರಕ್ಕೆ ತೆರಳದಂತೆ ಜನರಿಗೆ ಸೂಚನೆ ನೀಡಲಾಗಿದೆ.
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಕೃಷ್ಣ ನದಿಯ ಒಳಹರಿವಿನಲ್ಲಿ ಏರಿಕೆ ಕಂಡು ಬಂದಿದೆ.ಬೆಂಗಳೂರಿನಲ್ಲೂ ಮಳೆಬೆಂಗಳೂರಿನಲ್ಲೂ ತಡರಾತ್ರಿಯಿಂದ ಭಾರಿ ಮಳೆಯಾಗಿದೆ. ಇಂದು ಬೆಳಿಗ್ಗೆಯೂ ನಗರದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿದೆ. ರಾತ್ರಿ ಆರಂಭವಾದ ಮಳೆ ಇಂದು ಮುಂಜಾನೆವರೆಗೂ ಸುರಿದಿದೆ.ಮೆಜೆಸ್ಟಿಕ್, ಕಾರ್ಪೋರೆಷನ್, ವಿಧಾನಸೌಧ, ಚಂದ್ರಾ ಲೇಔಟ್, ಆರ್.ಟಿ. ನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ.
ರಾತ್ರಿ ಮಳೆ ಸುರಿದಿದ್ದರಿಂದ ಜನರು ಮನೆ ತೆರಳಲು ಪರದಾಡಬೇಕಾಯಿತು. ಇಂದು ಸಹ ಬೆಂಗಳೂರಿನಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.