ವಂಚನೆ ಪ್ರಕರಣ : ಆರೋಪಿಗಳಿಗೆ 27 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ವಂಚನೆ ಪ್ರಕರಣವೊಂದರಲ್ಲಿ ತಮಿಳುನಾಡಿನ ವಿಶೇಷ ಸಿಬಿಐ ನ್ಯಾಯಾಲಯ ಕೆ.ಮೋಹನ್‍ರಾಜ್ ಮತ್ತು ಕಮಲವಲ್ಲಿ ಎಂಬುವವರಿಗೆ 27 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 42.76 ಕೋಟಿ ರೂ. ದಂಡ ವಿಧಿಸಿದೆ.
ಪೋ0ಜಿ ಯೋಜನೆಗಳ ಮೂಲಕ ಸಾರ್ವಜನಿಕ ಠೇವಣಿದಾರರಿಗೆ 870.10 ಕೋಟಿ ರೂ.ಗಳನ್ನು ವಂಚಿಸಿ ದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.
ಮೂರು ಖಾಸಗಿ ಸಂಸ್ಥೆಗಳಾದ ಫಾಸಿ ಫೋರೆಕ್ಸ್, ಟ್ರೇಡ್ ಇನ್ ಇಂಡಿಯಾ ಪ್ರೈ.ಲಿ., ಫಾಜಿ ಟ್ರೇಡಿಂಗ್ ಇಂಕ್ ಮತ್ತು ಫಾಜಿ ಮಾರ್ಕೆಟಿಂಗ್ ಕಂಪೆನಿಗಳ ಮೇಲೆ ತಲಾ 28.74 ಕೋಟಿ ದಂಡವನ್ನು ನ್ಯಾಯಾಲಯ ವಿಧಿಸಿದ್ದು, ಒಟ್ಟು 171.74 ಕೋಟಿ ರೂ. ದಂಡ ವಿಧಿಸಿದೆ.
ಆರೋಪಿಗಳ ವಿರುದ್ಧ ಮದ್ರಾಸ್ ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐ ಪ್ರಕರಣ ದಾಖಲಿಸಿತ್ತು. ತಿರುಪುರ್ ಫಾಜಿ ಮಾರ್ಕೆಟಿಂಗ್ ಕಂಪೆನಿ ಮೋಹನ್‍ರಾಜ್, ನಿರ್ದೇಶಕರು ಮತ್ತು ಇತರೆ ಖಾಸಗಿ ಕಂಪೆನಿಗಳು ಸೇರಿದಂತೆ ಇನ್ನಿತರರು ಜುಲೈ 2008ರಿಂದ ಸೆಪ್ಟೆಂಬರ್ 2009ರ ನಡುವೆ ವಿವಿಧ ಯೋಜನೆಗಳನ್ನು ರೂಪಿಸಿದ್ದರು ಮತ್ತು ಠೇವಣಿದಾರರಿಂದ ಠೇವಣಿ ಸಂಗ್ರಹಿಸುವ ಮೂಲಕ 870.10 ಕೋಟಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವೆಬ್‍ಸೈಟ್ ಮೂಲಕ ಕಂಪೆನಿಗಳ ನಿರ್ದೇಶಕರು ಸೇರಿದಂತೆ ಆರೋಪಿಗಳು ಠೇವಣಿ ಮತ್ತು ಹೂಡಿಕೆಗಳನ್ನು ವಂಚನೆಯಿಂದ ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಸಾರ್ವಜನಿಕರಿಂದ ಪಡೆದ ಹಣವನ್ನು ಫಾರೆಕ್ಸ್ ಟ್ರೇಡಿಂಗ್ ವ್ಯವಹಾರದಲ್ಲಿ ಬಳಸಲಾಗುವುದು ಎಂದು ಹೇಳಿದ್ದರು.
ಸಂಗ್ರಹಿಸಿದ ಠೇವಣಿಗಳಿಗೆ ಅತಿ ಕಡಿಮೆ ಅವಧಿಯಲ್ಲಿ ಭಾರೀ ಬಡ್ಡಿ ನೀಡುವುದಾಗಿಯೂ ಕೂಡ ಭರವಸೆ ನೀಡಿದ್ದರು. ಕಂಪೆನಿಗಳ ಹೆಸರಿನಲ್ಲಿ ಖಾತೆ ತೆರೆದಿದ್ದರು. ತನಿಖೆ ನಂತರ ಆರೋಪಿಗಳ ವಿರುದ್ಧ ಅ.7, 2011ರಂದು ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿ ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಮಾನಿಸಿದ ನ್ಯಾಯಾಲಯ ಶಿಕ್ಷೆ ವಿಧಿಸಿದೆ.