ಲೋನ್ ಆ್ಯಪ್‌ಗಳಿಗೆ ಮೂಗುದಾರ, ಡಿಜಿಟಲ್ ಸಾಲ, ವಂಚನೆ ತಡೆಗೆ ಆರ್‌ಬಿಐ ಕಸರತ್ತು

ಸುಲಭವಾಗಿ ಸಾಲ ನೀಡಿ, ಗ್ರಾಹಕರನ್ನು ಶೋಷಿಸುವ ‘ಲೋನ್ ಆ್ಯಪ್’ಗಳು ಮತ್ತು ಡಿಜಿಟಲ್ ಸಾಲ ವ್ಯವಸ್ಥೆಗಳಲ್ಲಿನ ವಂಚನೆ ತಡೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಂದಾಗಿದೆ. ಈ ನಿಟ್ಟಿನಲ್ಲಿ ಮೊದಲ ಹಂತದ ಮಹತ್ವದ ಮಾನದಂಡಗಳನ್ನು ಬಿಡುಗಡೆ ಮಾಡಿದೆ.
ಈ ಬಗ್ಗೆ ಅಧ್ಯಯನ ಮಾಡಲು ಮತ್ತು ನಿಯಮಾವಳಿಗಳನ್ನು ಸೂಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವರ್ಷದ ಜನವರಿಯಲ್ಲಿ ಕಾರ್ಯಪಡೆಯೊಂದನ್ನು ರಚಿಸಿತ್ತು.
ಈ ಕಾರ್ಯಪಡೆಯು ಡಿಜಿಟಲ್ ಸಾಲ ನೀಡುವವರಿಗೆ ಅನ್ವಯವಾಗುವಂತೆ ಕಟ್ಟುನಿಟ್ಟಾದ ಮಾನದಂಡಗಳನ್ನು ಕಳೆದ ವರ್ಷ ಪ್ರಸ್ತಾಪಿಸಿದ್ದು, ಅವುಗಳಲ್ಲಿ ಕೆಲವನ್ನು ಈಗ ರಿಸರ್ವ್ ಬ್ಯಾಂಕ್ ಅಂಗೀಕರಿಸಿದೆ. ಆ ಮಾನದಂಡಗಳನ್ನು ಕೇಂದ್ರೀಯ ಬ್ಯಾಂಕ್ ಬುಧವಾರ ಬಿಡುಗಡೆ ಮಾಡಿದೆ.
ಮಾನದಂಡಗಳ ಪ್ರಮುಖಾಂಶಗಳು
ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನ್‌ಗಳನ್ನು ನೋಡಲ್ ಏಜೆನ್ಸಿಯೊಂದಿಗೆ ಸಮಾಲೋಚಿಸಿ, ಪರಿಶೀಲನೆ ಪ್ರಕ್ರಿಯೆಗೆ ಒಳಪಡಿಸಬೇಕು.
* ಸಾಲಗಾರನಿಗೆ ಸಾಲ ಒಪ್ಪಂದದ ಪ್ರಮುಖ ಅಂಶಗಳ ದಾಖಲೆಯನ್ನು ಒದಗಿಸಬೇಕು.
* ಡಿಜಿಟಲ್ ಲೋನ್‌ಗಳಲ್ಲಿನ ಎಲ್ಲಾ ಅಂತರ್ಗತ ವೆಚ್ಚವನ್ನು ವಾರ್ಷಿಕ ಶೇಕಡಾವಾರು ದರ ರೂಪದಲ್ಲಿ ವಿವರಿಸಬೇಕು.
* ಸಾಲಗಾರನ ಒಪ್ಪಿಗೆಯಿಲ್ಲದೆ ಕ್ರೆಡಿಟ್ ಮಿತಿಯಲ್ಲಿ ಯಾವುದೇ ಸ್ವಯಂಪ್ರೇರಿತ ಹೆಚ್ಚಳವನ್ನು ನಿಷೇಧಿಸಲಾಗಿದೆ.
* ಕೂಲಿಂಗ್-ಆಫ್ ಅಥವಾ ಲುಕ್-ಅಪ್ ಅವಧಿಯಲ್ಲಿ ಸಾಲಗಾರರು ಡಿಜಿಟಲ್ ಲೋನ್‌ಗಳಿಂದ ನಿರ್ಗಮಿಸಬಹುದು.
* ಸಾಲಗಾರನು ಸಲ್ಲಿಸಿದ ಯಾವುದೇ ದೂರನ್ನು ನಿಯಂತ್ರಿತ ಘಟಕವು 30 ದಿನಗಳ ನಿಗದಿತ ಅವಧಿಯೊಳಗೆ ಪರಿಹರಿಸದಿದ್ದರೆ, ಭಾರತೀಯ ರಿಸರ್ವ್ ಬ್ಯಾಂಕ್‌ಗೆ ದೂರು ಸಲ್ಲಿಸಬಹುದು.