ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ

ಮುಂಬರುವ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಕಾಂಗ್ರೆಸ್ ಪಕ್ಷ ಸಿದ್ದತೆ ಆರಂಭಿಸಿದ್ದು ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ “ಕಾಂಗ್ರೆಸ್ ಕಾರ್ಯಪಡೆ” ಯ ಮೊದಲ ಸಭೆ ಸೋಮವಾರ ನಡೆಯಲಿದೆ.
೨೦೨೪ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯತಂತ್ರ ರೂಪಿಸುವುದು, ಚುನಾವಣೆ ಎದುರಿಸಲು ಸಿದ್ಧತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಚುನಾವಣಾ ಕಾರ್ಯತಂತ್ರದ ಗುಂಪಿನ ಸದಸ್ಯರಾದ ಪಿ ಚಿದಂಬರಂ, ಮುಕುಲ್ ವಾಸ್ನಿಕ್, ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್, ಅಜಯ್ ಮಾಕನ್, ರಣದೀಪ್ ಸುರ್ಜೆವಾಲಾ, ಪ್ರಿಯಾಂಕಾ ಗಾಂಧಿ ವಾದ್ರಾ, ಮತ್ತು ಸುನಿಲ್ ಕಾನುಗೋಲು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಕಾರ್ಯಪಡೆಯ ಮೊದಲ ಸಭೆ ಇದಾಗಿದೆ. ಚುನಾವಣಾ ಕಾರ್ಯತಂತ್ರದ ಗುಂಪಿನ ಸದಸ್ಯರು ಕಾರ್ಯಪಡೆಯ ಕೆಲಸ ಮತ್ತು ೨೦೨೪ ರ ಚುನಾವಣೆಯ ಯೋಜನೆಯ ಬಗ್ಗೆ ಹೊಸ ಅಧ್ಯಕ್ಷರಿಗೆ ಮಾಹಿತಿ ನೀಡಲಿದ್ದು ಸಭೆಯಲ್ಲಿ ಚುನಾವಣೆಯ ರಣತಂತ್ರ ರೂಪಿಸುವ ಸಾಧ್ಯತೆಗಳಿವೆ.
೨೦೨೪ ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ “ರಾಜಕೀಯ ಸವಾಲುಗಳನ್ನು” ಎದುರಿಸಲು ರಾಜಸ್ಥಾನದ ಉದಯ್‌ಪುರದಲ್ಲಿ ಮೂರು ದಿನಗಳ ದೊಡ್ಡ ಸಮಾವೇಶಕ್ಕೆ ಮುಂಚೆಯೇ ದೇಶದ ಹಳೆಯ ಪಕ್ಷಗಳಲ್ಲಿ ಒಂದಾದ ಕಾಂಗ್ರೆಸ್ ಪಕ್ಷ ಕಳೆದ ಏಪ್ರಿಲ್‌ನಲ್ಲಿ “ಸಶಕ್ತ ಕ್ರಿಯಾ ಗುಂಪನ್ನು” ರಚಿಸಿತ್ತು.
ಎಂಟು ಸದಸ್ಯರ ಸಮಿತಿ ಸಲ್ಲಿಸಿದ ವರದಿಯ ನಂತರ ಆಗಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು ೨೦೨೪ ರ ಲೋಕಸಭೆ ಚುನಾವಣೆ ಎದುರಿಸುವ ಕುರಿತು ಕಾರ್ಯಪಡೆ ರಚಿಸಿದ್ದರು.