ಲಾಲೂ ಭ್ರಷ್ಟಾಚಾರ ಪ್ರಕರಣಕ್ಕೆ ಮರುಜೀವ..!

ಬೀಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಮರು ಜೀವ ನೀಡಲು ಸಿಬಿಐ ತೀರ್ಮಾನಿಸಿದೆ ಎನ್ನಲಾಗಿದ್ದು, ಇದು ಬಿಹಾರದಲ್ಲಿ ಜಿದ್ದಾಜಿದ್ದಿ ರಾಜಕೀಯಕ್ಕೆ ವೇದಿಕೆ ಕಲ್ಪಿಸುವ ಸಾಧ್ಯತಗಳಿವೆ.ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗಿನ ಸಖ್ಯ ತೊರೆದು ಆರ್‍ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ ನಂತರ ಸೇಡಿನ ರಾಜಕೀಯ ಆರಂಭವಾಗಿದೆ.
ಯುಪಿಎ ಸರ್ಕಾರದಲ್ಲಿ ರೈಲ್ವೇ ಖಾತೆ ಸಚಿವರಾಗಿದ್ದ ಲಾಲೂ ಅವರು ರೈಲ್ವೆ ಯೋಜನೆಗಳ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಸಿಬಿಐ 2018ರಲ್ಲಿ ತನಿಖೆ ಆರಂಭಿಸಿತ್ತು.ಆದರೆ, ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು 2021ರಲ್ಲಿ ಪ್ರಕರಣವನ್ನು ರದ್ದುಗೊಳಿಸಲಾಗಿತ್ತು. ಇದೀಗ ಅದೇ ಪ್ರಕರಣಕ್ಕೆ ಮರು ಜೀವ ನೀಡಲು ಸಿಬಿಐ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಬಿಹಾರದ ಉಪಮುಖ್ಯಮಂತ್ರಿಯಾಗಿರುವ ಲಾಲೂ ಅವರ ಪುತ್ರ ತೇಜಸ್ವಿ ಯಾದವ್ ಹಾಗೂ ಪುತ್ರಿಯರಾದ ಚಂದಾ ಯಾದವ್ ಮತ್ತು ರಾಗಿಣಿ ಯಾದವ್ ಅವರುಗಳು ಆರೋಪಿಗಳಾಗಿದ್ದಾರೆ.ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ತಮ್ಮ ಆರೋಪಗಳ ಸುರಿಮಳೆಗೈಯುತ್ತಿರುವ ಸಂದರ್ಭದಲ್ಲೇ ಸಿಬಿಐನ ಈ ತೀರ್ಮಾನ ಬಿಹಾರದಲ್ಲಿ ರಾಜಕೀಯ ಬಿರುಗಾಳಿ ಬೀಸುವ ಸೂಚನೆಗಳು ಗೋಚರಿಸುತ್ತಿವೆ.
ಆರ್‍ಜೆಡಿ ಪಕ್ಷದೊಂದಿಗೆ ನಮ್ಮ ಜೆಡಿಯು ಪಕ್ಷ ಮಾಡಿಕೊಂಡಿರುವ ಮೈತ್ರಿಯನ್ನು ಸಹಿಸಲಾಗದೆ ಬಿಜೆಪಿಯವರು ಸಿಬಿಐ ಅನ್ನು ದುರ್ಬಳಕೆ ಮಾಡಿಕೊಂಡು ಹಳೆ ಪ್ರಕರಣಕ್ಕೆ ಮರು ಜೀವ ನೀಡಲು ಪ್ರೇರೆಪಿಸುತ್ತಿದೆ ಎಂದು ನಿತೀಶ್ ಕುಮಾರ್ ಆರೋಪಿಸಿದ್ದಾರೆ.
ಮುಂಬೈನ ಬಾಂದ್ರಾದಲ್ಲಿ ರೈಲು ಭೂಮಿ ಗುತ್ತಿಗೆ ಯೋಜನೆಗಳು ಮತ್ತು ಹೊಸ ದೆಹಲಿ ರೈಲು ನಿಲ್ದಾಣದ ನವೀಕರಣಕ್ಕಾಗಿ ಆಸಕ್ತಿ ಹೊಂದಿದ್ದ ರಿಯಲ್ ಎಸ್ಟೇಟ್ ಪ್ರಮುಖ ಡಿಎಲ್‍ಎಫ್ ಗ್ರೂಪ್‍ನಿಂದ ಲಾಲೂ ಅವರು ದಕ್ಷಿಣ ದೆಹಲಿಯ ಆಸ್ತಿಯೊಂದನ್ನು ಲಂಚವಾಗಿ ಸ್ವೀಕರಿಸಿದ್ದಾರೆ ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು.