ಲಾರಿ ಸಂಚಾರಕ್ಕೆ ಕ್ರಮ

ಗ್ರಾಮಾಂತರ ಪ್ರದೇಶಗಳ ರಸ್ತೆಗಳ ಸಾಮರ್ಥ್ಯಕ್ಕನುಗುಣವಾಗಿ ಲಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರು ವಿಧಾನಸಭೆಯಲ್ಲಿಂದು ತಿಳಿಸಿದರು.
ರಸ್ತೆಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ತೂಕವಿರುವ ಲಾರಿಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿವೆ. ಅದರಲ್ಲೂ ಸೀಮೆಂಟ್, ಮರಳು ತುಂಬಿದ ಲಾರಿಗಳನ್ನು ರಸ್ತೆಗಳ ಸಾಮರ್ಥ್ಯಕ್ಕನುಗುಣವಾಗಿ ಸಂಚರಿಸಲು ಅವಕಾಶ ಮಾಡಿಕೊಡುವುದು ಅಗತ್ಯವಾಗಿದೆ ಎಂದರು.
ಸಾರಿಗೆ ಇಲಾಖೆ ಜತೆ ಚರ್ಚಿಸಿ ಅತೀ ಹೆಚ್ಚು ಸಾಮರ್ಥ್ಯದ ಲಾರಿಗಳನ್ನು ಕಡಿಮೆ ಸಾಮರ್ಥ್ಯದ ರಸ್ತೆಗಳಲ್ಲಿ ಸಂಚರಿಸದಂತೆ ನಿಷೇಧಿಸಲು ಕ್ರಮಕೈಗೊಳ್ಳಲಾಗವುದು ಎಂದರು.ಪ್ರಶ್ನೋತ್ತರ ವೇಳೆಯಲ್ಲಿ ಬಂಡೆಪ್ಪ ಕಾಶಂಪೂರ್ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಚಿವರು, ರಸ್ತೆಗಳನ್ನು ಅಗೆದು ಪೈಪ್‌ಲೇನ್‌ಗಳನ್ನು ಅಳವಡಿಸುವಾಗಲೂ ವಾಹನಗಳ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು, ಜಲಮಿಷನ್ ಯೋಜನೆಯಡಿ ಪೈಪ್‌ಲೇನ್ ಅಳವಡಿಸಲು ಅಗೆದ ರಸ್ತೆಗಳನ್ನು ಕೂಡಲೇ ಮುಚ್ಚಿ ಸಂಚಾರಕ್ಕೆ ಅನುವು ಮಾಡಿಕೊಡುವ ಷರತ್ತನ್ನು ವಿಧಿಸಲಾಗಿದೆ ಎಂದು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನಜೀವನ್ ಮಿಷನ್ ಯೋಜನೆಯಡಿ ಎಲ್ಲ ೧೦೮ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.ಈಗಾಗಲೇ ೮೮ ಹಳ್ಳಿಗಳಿಗೆ ನಲ್ಲಿಗಳ ಮೂಲಕ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.
೨೧ ಹಳ್ಳಿಗಳಲ್ಲಿ ಈಗಾಗಲೇ ನಲ್ಲಿ ನೀರು ಕಲ್ಪಿಸುವ ಟೆಂಡರ್ ಪೂರ್ಣಗೊಳಿಸಲಾಗಿದೆ. ಇದರಿಂದ ೨೮,೬೬೨ ಮನೆಗಳಿಗೆ ನಲ್ಲಿ ನೀರಿನ ಸೌಲಭ್ಯ ದೊರೆಯಲಿದೆ ಎಂದು ಉತ್ತರಿಸಿದರು.