ಲವ್ ಜಿಹಾದ್ ಬದಲಿಗೆ ಲವ್ ಕೇಸರಿ ಹೇಳಿಕೆ; ಶ್ರೀರಾಮಸೇನೆಯ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲು

ಲವ್ ಜಿಹಾದ್ ಬದಲಿಗೆ ಲವ್ ಕೇಸರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ರಾಜಾಚಂದ್ರ ರಾಮನಗೌಡ, ಮಂಜುನಾಥ್ ಎಂಬವರ ವಿರುದ್ಧ FIR ದಾಖಲು ಮಾಡಲಾಗಿದೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ. ಶ್ರೀರಾಮಸೇನೆ ಸಂಚಾಲಕ ರಾಜಾಚಂದ್ರ ರಾಮನಗೌಡ ಹಾಗೂ ಶ್ರೀರಾಮಸೇನೆ ರಾಯಚೂರು ಜಿಲ್ಲಾಧ್ಯಕ್ಷ ಮಂಜುನಾಥ್ ಎಂಬವರು ರಾಮನವಮಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಅನ್ಯ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆ ಆರೋಪದಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್ 153, 153(A), 295(A)ರ ಅಡಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಇತ್ತ ಬೆಂಗಳೂರಿನ ಜೆ.ಜೆ.ನಗರದಲ್ಲಿ ಯುವಕ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಹತ್ಯೆ ಉದ್ದೇಶದಿಂದ ಚಾಕು ಹಾಕಿರಲಿಲ್ಲವೆಂದು ಜಮೀರ್ ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ. ಹಾಗಾದರೆ ಚಾಕು ಚುಚ್ಚುವುದು ಏಕೆ, ಕೇಕ್ ಕಟ್ ಮಾಡ್ತಾರಾ? ಪೂಜೆ ಮಾಡಲು ಚಾಕು ಹಾಕ್ತಾರಾ? ಏನ್ ಮಾತಾಡುತ್ತಿದ್ದೀರಿ? ಚಾಕೊಲೇಟ್ ಕಟ್ ಮಾಡಲು ಚಾಕು ಹಾಕಿದ್ನಾ? ಕೊಲ್ಲುವ ಉದ್ದೇಶದಿಂದಲೇ ಚಂದ್ರುಗೆ ಚಾಕು ಹಾಕಿದ್ದಾರೆ. ನಿಶ್ಚಿತವಾಗಿ ಚಂದ್ರುಗೆ ನ್ಯಾಯ ಸಿಗುತ್ತೆ. ಚಂದ್ರು ಕುಟುಂಬಕ್ಕೆ ಸರ್ಕಾರ ₹25 ಲಕ್ಷ ಪರಿಹಾರ ನೀಡಬೇಕು ಎಂದು ಜಮೀರ್ ಅಹ್ಮದ್ಖಾನ್ ವಿರುದ್ಧ ಮುತಾಲಿಕ್ ಕೆಂಡಾಮಂಡಲವಾಗಿದ್ದಾರೆ.