ರೇಸ್ ಕೋರ್ಸ್ ರಸ್ತೆ ಇನ್ನು ಮುಂದೆ ಅಂಬರೀಶ್ ರಸ್ತೆ; ನಾಮಫಲಕ ಅನಾವರಣಗೊಳಿಸಿದ ಸಿಎಂ
ಬೆಂಗಳೂರು: ನಗರದ ರೇಸ್ ಕೋರ್ಸ್ ರಸ್ತೆಗೆ ಕನ್ನಡದ ಖ್ಯಾತ ನಟ ಮತ್ತು ರಾಜಕಾರಿಣಿ ಅಂಬರೀಶ್ ಅವರ ಹೆಸರನ್ನು ಇಡಲಾಗಿದ್ದು, ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಮಫಲಕ ಅನಾವರಣಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ‘ಕರ್ನಾಟಕದ ಎಲ್ಲರ ಮನಸ್ಸನ್ನ ಗೆದ್ದಂತಹ ನೇರ ದಿಟ್ಟ ನಿರಂತರ ನಟ ಅಂಬರೀಶ್. ಅವರ ನೆನಪಿಗಾಗಿ ಇಂದು ರೇಸ್ ಕೋರ್ಸ್ ರಸ್ತೆಯನ್ನು ಅಂಬರೀಶ್ ಅವರ ಹೆಸರಿನಲ್ಲಿ ಅತ್ಯಂತ ಸಂತೋಷದಿಂದ ನಾಮಕರಣ ಮಾಡಿದ್ದೇವೆ. ಇದು ಅವರು ಹೆಚ್ಚು ಓಡಾಡಿದ ಸ್ಥಳ. ಎಲ್ಲಾ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಈ ರಸ್ತೆಗೆ ಅವರ ಹೆಸರನ್ನ ಇಟ್ಟಿದ್ದೇವೆ’ ಎಂದು ಹೇಳಿದರು.
ಅಂಬರೀಶ್ ಅವರದ್ದು ಬಹುಮುಖ ವ್ಯಕ್ತಿತ್ವ ಎಂದು ಕೊಂಡಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ‘ಅಂಬರೀಶ್ ಅವರು ಸಿನಿಮಾದಲ್ಲಿ ಸಹಜವಾಗಿ ನಟನೆ ಮಾಡುತ್ತಿದ್ದರು. ಜನರನ್ನು ಹಿಡಿದಿಟ್ಟುಕೊಳ್ಳುವ ವ್ಯಕ್ತಿತ್ವ ಇತ್ತು. ರೀಲ್ ಅಂಡ್ ರಿಯಲ್ ಲೈಫ್ನಲ್ಲಿ ಒಂದೇ ತರಹ ಇದ್ದರು. ಅವರದ್ದು ನೇರ ವ್ಯಕ್ತಿತ್ವ. ಸಾರ್ವಜನಿಕ ಜೀವನಕ್ಕೆ ಬಂದಮೇಲೆ ವಸತಿ ಸಚಿವರಾಗಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಕಾವೇರಿ ವಿಚಾರ ಬಂದಾಗ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅಧಿಕಾರ ಅವರನ್ನ ಹುಡುಕಿಕೊಂಡು ಬರುತ್ತಿತ್ತು. ಅವರು ಯಾವತ್ತು ಅಧಿಕಾರದ ಹಿಂದೆ ಹೋಗಲಿಲ್ಲ. ಅವರು ನನಗೆ ಬಹಳ ಒಳ್ಳೆಯ ಗೆಳೆಯರಾಗಿದ್ದರು. ಅವರ ಜೀವನ ಒಂದು ತೆರೆದ ಪುಸ್ತಕವಾಗಿತ್ತು’ ಎಂದು ಬಣ್ಣಿಸಿದರು.