ಕ್ರೀಡೆ

ರಿಷಭ್‌ ಪಂತ್‌ ಶತಕದ ನೆರವಿನಿಂದ ಏಕದಿನ ಸರಣಿ ಗೆದ್ದ ಭಾರತ

ಮ್ಯಾಂಚೆಸ್ಟರ್‌: ರಿಷಭ್‌ ಪಂತ್‌( 125*) ಚೊಚ್ಚಲ ಶತಕ ಹಾಗೂ ಹಾರ್ದಿಕ್‌ ಪಾಂಡ್ಯ (4 ವಿಕೆಟ್‌, 71 ರನ್) ಆಲ್‌ರೌಂಡ್‌ ಆಟದ ನೆರವಿನಿಂದ ಭಾರತ ತಂಡ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿತು. ಆ ಮೂಲಕ ಓಡಿಐ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು.

ಇಲ್ಲಿನ ದಿ ಓಲ್ಡ್‌ ಟ್ರಾಫರ್ಡ್‌ ಮೈದಾನದಲ್ಲಿ ಇಂಗ್ಲೆಂಡ್‌ ನೀಡಿದ್ದ 260 ರನ್‌ ಗುರಿ ಹಿಂಬಾಲಿಸಿದ ಭಾರತ ತಂಡ 38 ರನ್‌ ಗಳಿಗೆ 3 ವಿಕೆಟ್‌ ಕಳೆದುಕೊಂಡಿತ್ತು. ನಂತರ 74 ರನ್‌ ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಶಿಖರ್‌ ಧವನ್(1), ರೋಹಿತ್‌ ಶರ್ಮಾ(17), ವಿರಾಟ್‌ ಕೊಹ್ಲಿ(17)ಹಾಗೂ ಸೂರ್ಯಕುಮಾರ್‌ ಯಾದವ್‌(16) ಬಹುಬೇಗ ವಿಕೆಟ್‌ ಒಪ್ಪಿಸಿದರು.

ಈ ವೇಳೆ ಎರಡನೇ ಓಡಿಐ ರೀತಿಯಲ್ಲೇ ಭಾರತ ತಂಡ ಸೋಲುವುದು ಬಹುತೇಕ ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, 5ನೇ ವಿಕೆಟ್‌ಗೆ ಜೊತೆಯಾದ ರಿಷಭ್‌ ಪಂತ್‌ ಹಾಗೂ ಹಾರ್ದಿಕ್‌ ಪಾಂಡ್ಯ 133 ರನ್‌ಗಳ ನಿರ್ಣಾಯಕ ಜೊತೆಯಾಟವಾಡುವ ಮೂಲಕ ಪಂದ್ಯದ ದಿಕ್ಕನ್ನು ಬದಲಿಸಿದರು. ಬೌಲಿಂಗ್‌ನಲ್ಲಿ 4 ವಿಕೆಟ್‌ ಕಬಳಿಸಿದ್ದ ಹಾರ್ದಿಕ್‌ ಪಾಂಡ್ಯ, ಬ್ಯಾಟಿಂಗ್‌ನಲ್ಲಿ 55 ಎಸೆತಗಳಲ್ಲಿ 71 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಆದರೆ, ತಂಡವನ್ನು ಗೆಲುವಿನ ಸನಿಹ ತಂದು ಅವರು ವಿಕೆಟ್‌ ಒಪ್ಪಿಸಿದರು.

ರಿಷಭ್‌ ಪಂತ್ ಚೊಚ್ಚಲ ಶತಕ: ಕಳೆದ ಪಂದ್ಯದಲ್ಲಿ ನಿರೀಕ್ಷೆ ಹುಸಿಗೊಳಿಸಿದ್ದ ರಿಷಭ್‌ ಪಂತ್ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್‌ ಬೌಲರ್‌ಗಳಿಗೆ ಬೆಂಡೆತ್ತಿದರು. ಆರಂಭದಲ್ಲಿ ಅತ್ಯಂತ ತಾಳ್ಮೆಯಿಂದ ಬ್ಯಾಟ್ ಮಾಡಿದ್ದ ಪಂತ್‌, ಅರ್ಧಶತಕ ಸಿಡಿಸಿದ ಬಳಿಕ ಇಂಗ್ಲೆಂಡ್‌ ಬೌಲರ್‌ಗಳ ಮೇಲೆ ದಾಳಿ ನಡೆಸಿದರು. ಎದುರಿಸಿದ 113 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್‌ ಹಾಗೂ 16 ಬೌಂಡರಿಗಳೊಂದಿಗೆ ಅಜೇಯ 125 ರನ್‌ ಗಳಿಸಿದರು. ತಮ್ಮ ಚೊಚ್ಚಲ ಓಡಿಐ ಶತಕದ ಮೂಲಕ ಭಾರತ ತಂಡಕ್ಕೆ 5 ವಿಕೆಟ್‌ಗಳ ಗೆಲುವು ತಂದುಕೊಟ್ಟರು. ಅದರಲ್ಲೂ 42ನೇ ಓವರ್‌ನಲ್ಲಿ ಡೇವಿಡ್‌ ವಿಲ್ಲೀಗೆ ಸತತ 5 ಬೌಂಡರಿಗಳನ್ನು ಸಿಡಿಸಿದ್ದು ಅತ್ಯಂತ ವಿಶೇಷತೆಯಿಂದ ಕೂಡಿತ್ತು. ಅಂತಿಮವಾಗಿ ಭಾರತ ತಂಡ 42.1 ಓವರ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಭಾರತಕ್ಕೆ 260 ರನ್‌ ಗುರಿ ನೀಡಿದ್ದ ಇಂಗ್ಲೆಂಡ್‌: ಇದಕ್ಕೂ ಮುನ್ನ ಮತ್ತೊಮ್ಮೆ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಇಂಗ್ಲೆಂಡ್‌ ತಂಡ, 45.5 ಓವರ್‌ಗಳಿಗೆ 259 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಆ ಮೂಲಕ ರೋಹಿತ್‌ ಶರ್ಮಾ ನಾಯಕತ್ವದ ಟೀಮ್‌ ಇಂಡಿಯಾಗೆ 260 ರನ್‌ಗಳ ಗುರಿಯನ್ನು ನೀಡಿತ್ತು.
ಇಂಗ್ಲೆಂಡ್‌ ಪರ ಜೇಸನ್‌ ರಾಯ್‌ 41 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ ಬಳಿಕ, ತಂಡದ ಜವಾಬ್ದಾರಿ ಹೊತ್ತ ನಾಯಕ ಜೋಸ್‌ ಬಟ್ಲರ್‌ 80 ಎಸೆತಗಳಲ್ಲಿ 60 ರನ್‌ ಗಳಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಬಟ್ಲರ್‌ ಜೊತೆಗೆ ಬೆನ್‌ ಸ್ಟೋಕ್ಸ್‌ 27, ಮೊಯೀನ್‌ ಅಲಿ 34, ಲಿಯಾಮ್‌ ಲಿವಿಂಗ್‌ಸ್ಟೋನ್ 27 ಹಾಗೂ ಕ್ರೈಗ್‌ ಓವರ್ಟನ್‌ 32 ರನ್‌ಗಳ ನಿರ್ಣಾಯಕ ಕೊಡುಗೆಯನ್ನು ನೀಡಿದರು.

ಭಾರತ ತಂಡದ ಪರ ಪವರ್‌ಪ್ಲೇನಲ್ಲಿ ಅತ್ಯುತ್ತಮ ಬೌಲಿಂಗ್‌ ದಾಳಿ ನಡೆಸಿದ ಮೊಹಮ್ಮದ್‌ ಸಿರಾಜ್‌ ಎರಡೂ ವಿಕೆಟ್‌ ಪಡೆದರೂ ಮಧ್ಯಮ ಓವರ್‌ಗಳಲ್ಲಿ ದುಬಾರಿಯಾಗಿದ್ದರು. ಆದರೆ, ಮಧ್ಯಮ ಓವರ್‌ಗಳಲ್ಲಿ ಶಾರ್ಟ್‌ ರಣತಂತ್ರವನ್ನು ಪ್ರಯೋಗಿಸುವ ಮೂಲಕ ಹಾರ್ದಿಕ್‌ ಪಾಂಡ್ಯ(24ಕ್ಕೆ4), ಜೆಸನ್‌ ರಾಯ್‌, ಬೆನ್‌ ಸ್ಟೋಕ್ಸ್‌, ಜೋಸ್‌ ಬಟ್ಲರ್‌ ಹಾಗೂ ಲಿಯಾಮ್‌ ಲಿವಿಂಗ್‌ಸ್ಟೋನ್ ಸೇರಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಿತ್ತರು. ಯುಜ್ವೇಂದ್ರ ಚಹಲ್‌ 3 ಮತ್ತು ರವೀಂದ್ರ ಜಡೇಜಾ ಏಕೈಕ ವಿಕೆಟ್‌ ಪಡೆದಿದ್ದರು.

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌: 45.5 ಓವರ್‌ಗಳಿಗೆ 259/10 (ಜೋಸ್‌ ಬಟ್ಲರ್ 60, ಜೇಸನ್‌ ರಾಯ್‌ 41, ಕ್ರೈಗ್‌ ಓವರ್ಟನ್‌ 32, ಮೊಯೀನ್‌ ಅಲಿ 34; ಹಾರ್ದಿಕ್‌ ಪಾಂಡ್ಯ 24 ಕ್ಕೆ 4, ಯುಜ್ವೇಂದ್ರ ಚಹಲ್‌ 60ಕ್ಕೆ 3, ಮೊಹಮ್ಮದ್‌ ಸಿರಾಜ್‌ 66ಕ್ಕೆ 2, ರವೀಂದ್ರ ಜಡೇಜಾ 21 ಕ್ಕೆ 1)
ಭಾರತ: 42.1 ಓವರ್‌ಗಳಿಗೆ 261/5 (ರಿಷಭ್‌ ಪಂತ್‌ 125*, ಹಾರ್ದಿಕ್‌ ಪಾಂಡ್ಯ 71; ರೀಸ್‌ ಟಾಪ್ಲೀ 35ಕ್ಕೆ , ಬ್ರೈಡೆನ್‌ ಕಾರ್ಸ್‌ 45ಕ್ಕೆ 1, ಕ್ರೈಗ್‌ ಓವರ್ಟನ್‌ 54ಕ್ಕೆ 1)
ಪಂದ್ಯ ಶ್ರೇಷ್ಠ ಪ್ರಶಸ್ತಿ: ರಿಷಭ್‌ ಪಂತ್
ಸರಣಿ ಶ್ರೇಷ್ಠ ಪ್ರಶಸ್ತಿ: ಹಾರ್ದಿಕ್‌ ಪಾಂಡ್ಯ

Related Articles

Leave a Reply

Your email address will not be published. Required fields are marked *

Back to top button