
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಡೆಹ್ರಾಡೂನ್ ನಿಂದ ಮುಂಬೈಗೆ ಸಂಜೆ ಬಿಸಿಸಿಐ ಏರ್ ಲಿಫ್ಟ್ ಮಾಡಲಿದೆ.
ತಾಯಿಯನ್ನು ನೋಡಲು ಹೋಗುತ್ತಿದ್ದಾಗ ಉತ್ತರಾಖಂಡ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು.
ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಭ್ ಪಂತ್ ಅವರನ್ನು ಇಂದು ಸಂಜೆ ಏರ್ ಲಿಫ್ಟ್ ಮೂಲಕ ಮುಂಬೈ ಆಸ್ಪತ್ರೆಗೆ ಸ್ಥಳಾಂತರಿಸಲಿದ್ದು, ಅಗತ್ಯಬಿದ್ದರೆ ಇಂಗ್ಲೆಂಡ್ ಗೆ ಚಿಕಿತ್ಸೆಗಾಗಿ ಕಳುಹಿಸಿಕೊಡುವ ಸಾಧ್ಯತೆ ಇದೆ.
ರಿಷಭ್ ಪಂತ್ ಗೆ ಅಪಘಾತದಲ್ಲಿ ಕಾಲಿನ ಮಂಡಿಗೆ ಬಲವಾದ ಪೆಟ್ಟು ಬಿದ್ದಿದ್ದು, ಮಂಡಿ ಮೂಲೆಗಳ ನಡುವೆ ಬಿರುಕು ಬಿಟ್ಟಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದ್ದು, ಬಿಸಿಸಿಐ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಬಗ್ಗೆ ನಿಗಾ ವಹಿಸಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.