ರಾಷ್ಟ್ರೀಯ ಕುಸ್ತಿ ರಾಜ್ಯಕ್ಕೆ ಬೆಳ್ಳಿ ಗರಿ

ಬೆಂಗಳೂರು: ಕರ್ನಾಟಕ ಕುಸ್ತಿ ಅಸೋಶಿಯೇಶನ್ ಇತಿಹಾಸದಲ್ಲೆ ಮೊದಲ ಬಾರಿಗೆ ಕರ್ನಾಟಕದ ಕುಸ್ತಿಪಟುಗಳು ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳಿಸಿ ಇತಿಹಾಸ ಬರೆದಿದ್ದಾರೆ.ಭಾರತೀಯ ಕುಸ್ತಿಸಂಘದ ವತಿಯಿಂದ ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕುಸ್ತಿಪಟುಗಳಾದ ಸಂದೀಪ್ ಹಳಲ್ದೆಕರ್ ಬೆಳ್ಳಿ, ದರಿಯಪ್ಪ ಕಂಚಿನ ಪದಕ ಗೆದ್ದಿದ್ದಾರೆ.
ಎರಡನೇ ದಿನದಂದು ನಡೆದ ಪಂದ್ಯಾವಳಿಯಲ್ಲಿ ಕರ್ನಾಟಕದ ಹಳಿಯಾಳದ ಸಂದೀಪ್ ಹಳಲ್ದೆಕರ್ರಾಷ್ಟ್ರೀಯ ನ್ಯಾಷನಲ್ ಫೈನಲ್ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡು ಬೆಳ್ಳಿ ಪದಕ ಪಡೆದರು, ಮತ್ತೋರ್ವ ಕುಸ್ತಿಪಟು ದರಿಯಪ್ಪ ೮೭.ಕೆ.ಜಿ ತೂಕ ವಿಭಾಗದಲ್ಲಿ ಗ್ರೀಕೋರೋಮಸ್ ಜೊತೆಯಲ್ಲಿ ಹಣಾಹಣಿ ನಡೆಸಿ ಸೆಮಿಫೈನಲ್ಸ್ ಗೆದ್ದು ಕಂಚಿನ ಪದಕ ಗಳಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಸಂದೀಪ್ ಹೊಳಲ್ದೆಕರ್‌ರವರು ಮೊದಲನೆ ಸುತ್ತಿನಲ್ಲಿ ಮಹಾರಾಷ್ಟ್ರ ಕುಸ್ತಿಪಟುವಿನೊಂದಿಗೆ ೫:೦ಅಂತರದಿಂದ ಜಯಗಳಿಸಿ ಬೆಳ್ಳಿ ಪದಕ ಪಡೆದಿರುತ್ತಾರೆ. ಈ ಮೂಲಕ ರಾಜ್ಯದ ಇತಿಹಾಸದಲ್ಲೆ ಹಲವು ವರ್ಷಗಳ ನಂತರ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಇದೇ ಮೊದಲಬಾರಿಗೆ ಎರಡು ಪದಕಗಳಿಸುವಲ್ಲಿ ಯಶಸ್ವಿಯಾಗಿದೆ.
ಈ ವೇಳೆ ಕರ್ನಾಟಕ ಕುಸ್ತಿಸಂಘದ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಮಾತನಾಡಿ, ಇದು ಪ್ರಾರಂಭ ಮುಂದಿನ ದಿನಗಳಲ್ಲಿ ಕರ್ನಾಟಕ ತಂಡವನ್ನು ಒಲಂಪಿಕ್‌ಗೆ ಕಳಿಹಿಸುವ ಗುರಿ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಕುಸ್ತಿಪಟುಗಳಿಗೆ ಉತ್ತಮ ತರಬೇತಿ, ಪೌಷ್ಟಿಕ ಆಹಾರ ಸೇರಿದಂತೆ ಮೂಲ ಸೌಲಭ್ಯಗಳನ್ನು ನೀಡುವ ಮೂಲಕ ತರಬೇತಿ ನೀಡಿ ಭಾರತದಲ್ಲೆ ಕರ್ನಾಟಕ ನಂ.೧ ಸ್ಥಾನಕ್ಕೆ ಏರಿಸುತ್ತೇವೆ ಎಂದು ತಿಳಿಸಿದರು.
ಇಬ್ಬರು ಕುಸ್ತಿಪಟುಗಳಿಗೆ ಕರ್ನಾಟಕ ಕುಸ್ತಿಸಂಘದ ಅಧ್ಯಕ್ಷರಾದ ಬಿ.ಗುಣರಂಜನ್‌ಶೆಟ್ಟಿ, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಜೆ.ಶ್ರೀನಿವಾಸ್ ಖಜಾಂಚಿ ಶ್ರೀನಿವಾಸ ಅಂಗಾರಕೋಡಿ, ಜಂಟಿ ಕಾರ್ಯದರ್ಶಿ ಕುಮಾರ್, ಕರ್ನಾಟಕ ಮುಖ್ಯ ತರಬೇತುದಾರರಾದ ವಿನೋದ್ ಕುಮಾರ್.ಕೆ, ಭಾರತೀಯ ಕುಸ್ತಿ ಸಂಘದ ಗೌರವ ಕಾರ್ಯದರ್ಶಿ ವಿ.ಎನ್.ಪ್ರಸೂದ್, ಸಹ ಕಾರ್ಯದರ್ಶಿ ವಿನೋದ್ ತೋಮರ್ ಪದಕ ತೊಡಿಸಿ ಪ್ರಮಾಣ ಪತ್ರ ವಿತರಿಸಿದರು.