ರಾಷ್ಟ್ರಿಯ

ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ

ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಜಾರ್ಖಂಡ್‌ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರನ್ನು ಘೋಷಿಸಿದೆ. ಇದಕ್ಕೂ ಮೊದಲು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಹೆಸರು ಚಾಲ್ತಿಯಲ್ಲಿತ್ತು. ಮಂಗಳವಾರ ಸಂಜೆ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಮುರ್ಮು ಅವರ ಆಯ್ಕೆಯನ್ನು ಅಂತಿಮಗೊಳಿಸಲಾಯಿತು. ಒಡಿಶಾ ಮೂಲದ 64 ವರ್ಷದ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಹುದ್ದೆ ಅಲಂಕರಿಸಿದಲ್ಲಿ, ಈ ಹುದ್ದೆಗೇರಿದ ದೇಶದ ಮೊದಲ ಬುಡಕಟ್ಟು ಮಹಿಳೆ ಎನಿಸಿಕೊಳ್ಳಲಿದ್ದಾರೆ.


ಮುರ್ಮು ಅವರು ಒಡಿಶಾದಲ್ಲಿ ಬಿಜೆಪಿ ಬೆಂಬಲದಿಂದ ಬಿಜೆಡಿ ಸರಕಾರ ರಚಿಸಿದ್ದ ವೇಳೆ ಸಿಎಂ ನವೀನ್‌ ಪಟ್ನಾಯಕ್‌ ಸಂಪುಟದಲ್ಲಿ ಸಚಿವರಾಗಿದ್ದರು. ಕಾರ್ಪೊರೇಟರ್‌ ಆಗಿ ರಾಜಕೀಯ ಜೀವನಕ್ಕೆ ಕಾಲಿರಿಸಿದ ಮುರ್ಮು ಅವರು ಎರಡು ಬಾರಿ ಶಾಸಕರಾಗಿದ್ದಾರೆ. ಜಾರ್ಖಂಡ್‌ ರಾಜ್ಯಪಾಲರಾಗಿದ್ದ ಅವರು 2013ರಲ್ಲಿ ಬಿಜೆಪಿಯ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಕಾರ‍್ಯಕಾರಿ ಸದಸ್ಯೆಯಾಗಿದ್ದರು.
ಬಿಜೆಪಿಯ ಸಿದ್ಧಾಂತಗಳಿಗೆ ಸರಿಯಾಗಿ ಒಗ್ಗುವ ಮಹಿಳೆ ಎನಿಸಿಕೊಂಡಿರುವ ದ್ರೌಪದಿ, ಪ್ರಸಿದ್ಧ ಬುಡಕಟ್ಟು ನಾಯಕಿ ಮಾತ್ರವಲ್ಲದೆ ಸಮರ್ಥ ಆಡಳಿತಗಾರರೂ ಆಗಿದ್ದಾರೆ, ಇದನ್ನು ಅವರು ಜಾರ್ಖಂಡ್‌ನ ರಾಜ್ಯಪಾಲರಾಗಿ ಅಧಿಕಾರಾವಧಿಯಲ್ಲಿ ಸಾಬೀತುಪಡಿಸಿದ್ದಾರೆ. ಜಾರ್ಖಂಡ್ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲೆ ಎನಿಸಿಕೊಂಡಿದ್ದರು.

ದ್ರೌಪದಿ ಮುರ್ಮು ಗೆಲುವಿನ ಸಾಧ್ಯತೆ ಹೆಚ್ಚು
ರಾಜಕೀಯ ವಿಶ್ಲೇಷಕರ ಪಕ್ರಾರ, ದ್ರೌಪದಿ ಮುರ್ಮುಗೆ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿಯ ಬೆಂಬಲವೂ ಇದೆ. ಒಡಿಶಾದಲ್ಲಿ ಬಿಜೆಡಿ ಹಾಗೂ ಬಿಜೆಪಿ ಸಹಯೋಗದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದ ಸಮಯದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ದ್ರೌಪದಿ ಮುರ್ಮು, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ಉತ್ತಮ ಸ್ನೇಹವನ್ನೂ ಹೊಂದಿದ್ದಾರೆ. ಇದರಿಂದಾಗಿ ಮುಂದಿನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಮುರ್ಮು ಹುಟ್ಟುಹಬ್ಬಕ್ಕೆ ಬಿಜೆಪಿ ಗಿಫ್ಟ್‌
ಸೋಮವಾರವಷ್ಟೇ ತಮ್ಮ 64ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿ ಬಿಜೆಪಿ ಉಡುಗೊರೆ ನೀಡಿದೆ. ದ್ರೌಪದಿ ಮುರ್ಮು ಅವರು1958ರ ಜೂನ್ 20 ರಂದು ಜನಿಸಿದರು. 64 ವರ್ಷದ ಮುರ್ಮು ಅವರು ಜಾರ್ಖಂಡ್ ರಾಜ್ಯದ 9ನೇ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದರು. ಅವರು ಭಾರತೀಯ ಜನತಾ ಪಕ್ಷದ ಸದಸ್ಯೆಯಾಗಿದ್ದಾರೆ.
ಬಿಜೆಪಿ ಮುರ್ಮು ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಆರಿಸಿರುವ ಹಿಂದೆ, 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬುಡಕಟ್ಟು ಮತಗಳ ಹಂಚಿಕೆಯ ಮೇಲೆ ಪರಿಣಾಮ ಬೀರುವುದಲ್ಲದೆ ಒಡಿಶಾದಲ್ಲಿ ಬಿಜೆಪಿಯ ಭವಿಷ್ಯವನ್ನು ನಿರ್ಧರಿಸಲಿದೆ. ಹಾಗೇನಾದರೂ ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಲು ಯಶಸ್ವಿಯಾದಲ್ಲಿ, ದೇಶದ ಉನ್ನತ ಸಾಂವಿಧಾನಿಕ ಹುದ್ದೆಗೇರಿದ 2ನೇ ಮಹಿಳೆ, ಮೊದಲ ಒಡಿಶಾ ಹಾಗೂ ಬುಡಕಟ್ಟು ಪ್ರಜೆ ಎನಿಸಲಿದ್ದಾರೆ.

ಯಾರಿದು ದ್ರೌಪದಿ ಮುರ್ಮು?
ದ್ರೌಪದಿ ಮುರ್ಮು ಅವರು ಕೌನ್ಸಿಲರ್ ಆಗಿ ತಮ್ಮ ರಾಜಕೀಯ ವೃತ್ತಿಜೀವನ ಆರಂಭಿಸಿದರು. ನಂತರ ರಾಯ್ರಂಗಪುರ ರಾಷ್ಟ್ರೀಯ ಸಲಹಾ ಮಂಡಳಿ ಅಥವಾ NAC ನ ಉಪಾಧ್ಯಕ್ಷರಾದರು. 2013ರಲ್ಲಿ ಅವರು ಬಿಜೆಪಿ ಪಕ್ಷದ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯ ಸ್ಥಾನಕ್ಕೆ ಏರಿದ್ದರು. ಭುವನೇಶ್ವರದ ರಮಾ ದೇವಿ ಮಹಿಳಾ ಕಾಲೇಜಿನಲ್ಲಿ ಕಲಾ ಪದವಿ ಪಡೆದ ಅವರು ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಸುಮಾರು ಎರಡು ದಶಕಗಳನ್ನು ಕಳೆದಿದ್ದಾರೆ.
ಮುರ್ಮು ಜೀವನದಲ್ಲಿ ನಡೆದ ಕಹಿ ಘಟನೆ
ದ್ರೌಪದಿ ಮುರ್ಮು ಶ್ಯಾಮ್ ಚರಣ್ ಮುರ್ಮು ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದರು. ಆದರೆ ದ್ರೌಪದಿ ಮುರ್ಮು ಅವರ ಜೀವನದಲ್ಲಿ ನಡೆದ ಕೆಲವು ದುರಂತಗಳಿಂದ ಅವರ ಪತಿ ಮತ್ತು ಇಬ್ಬರು ಪುತ್ರರು ವಿಧಿವಶರಾಗಿದ್ದಾರೆ.
ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜುಲೈ 24ರಂದು ಮುಕ್ತಾಯವಾಗಲಿದೆ. ಜುಲೈ 18ರಂದು ಹೊಸ ರಾಷ್ಟ್ರಪತಿ ಚುನಾವಣೆ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button