ರಾಜಕೀಯ

ರಾಷ್ಟ್ರಪತಿ ಆಯ್ಕೆಗೆ ಗರಿಗೆದರಿದ ರಾಜಕೀಯ ಚಟುವಟಿಕೆ; ದೇವೇಗೌಡರು, ಖರ್ಗೆ ಕಣಕ್ಕೆ..?

president election hd deve gowda mallikarjun kharge

ದೇಶದ 15ನೇ ರಾಷ್ಟ್ರಪತಿ ಆಯ್ಕೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸುತ್ತಿದ್ದಂತೆ, ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ರಾಜ್ಯಸಭೆ ವಿರೋಧ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟದ ಅಭ್ಯರ್ಥಿಯಾಗುವ ಸಾಧ್ಯತೆ ಇದ್ದು, ಮಾಜಿ ಪ್ರಧಾನಿ ದೇವೇಗೌಡರು ತೃತೀಯ ರಂಗದ ಅಭ್ಯರ್ಥಿಯಾಗುವ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಈವರೆಗೂ ತನ್ನ ಅಭ್ಯರ್ಥಿಯ ಕುರಿತು ಗುಟ್ಟು ಬಿಟ್ಟುಕೊಟ್ಟಿಲ್ಲ.

ಕೇಂದ್ರ ಚುನಾವಣಾ ಆಯೋಗ ನಿನ್ನೆ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ್ದು, ಮತದಾನಕ್ಕೆ ಜುಲೈ 18ನ್ನು ನಿಗದಿ ಮಾಡಿದೆ, ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24ಕ್ಕೆ ಕೊನೆಗೊಳ್ಳಲಿದೆ.

ಮುಂದಿನ ರಾಷ್ಟ್ರಪತಿ ಆಯ್ಕೆಗೆ ಅಭ್ಯರ್ಥಿಗಳ ಹುಡುಕಾಟ ಜೋರಾಗಿದೆ. ಬಿಜೆಪಿ ನೇತೃತ್ವದ ಎನ್‍ಡಿಎ ಕೂಟ ಶೇ.48ರಷ್ಟು ಮತಗಳನ್ನು ಹೊಂದಿದ್ದು, ಕಾಂಗ್ರೆಸ್ ಸೇರಿ ಉಳಿದ ಪಕ್ಷಗಳ ಮತಗಳು ಶೇ.52 ಬಲಾಬಲ ಹೊಂದಿವೆ. ಹೀಗಾಗಿ ರಾಷ್ಟ್ರಪತಿ ಚುನಾವಣೆ ಕುತೂಹಲ ಕೆರಳಿಸಿದೆ.ಬಿಜೆಪಿ ತನ್ನ ಸಹವರ್ತಿ ಪಕ್ಷಗಳು ಹಾಗೂ ಸೌಹಾರ್ದ ಸಂಬಂಧದ ಮಿತ್ರ ಪಕ್ಷಗಳಾದ ಬಿಹಾರದ ಜೆಡಿಯು, ಆಂಧ್ರ ಪ್ರದೇಶದ ವೈಎಸ್‍ಆರ್‍ಸಿಪಿ, ಒಡಿಸ್ಸಾದ ಬಿಜೆಡಿ ಸೇರಿದಂತೆ ಹಲವು ಪಕ್ಷಗಳ ಜೊತೆ ಸಮಾಲೋಚನೆ ನಡೆಸುತ್ತಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಶ್ಚಿಮ ಬಂಗಾಳದ ಟಿಎಂಸಿ ಮುಖ್ಯಸ್ಥೆ ಹಾಗು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರದ ಎನ್‍ಸಿಪಿ ನಾಯಕ ಶರದ್ ಪವಾರ್, ಸಿಪಿಎಂನ ಸೀತಾರಾಮ್ ಯಚೂರಿ ಅವರ ಜೊತೆ ಅಭ್ಯರ್ಥಿ ಆಯ್ಕೆ ಕುರಿತು ಪ್ರಾಥಮಿಕ ಸಮಾಲೋಚನೆ ನಡೆಸಿದ್ದಾರೆ.ಕಾಂಗ್ರೆಸ್ ಪರವಾಗಿ ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿಯಾಗಲಿದ್ದಾರೆ ಎಂದು ಚರ್ಚೆಯ ವೇಳೆ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

2017ರ ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ನಡುವೆ ಒಡಕು ಮೂಡಿದ್ದು, ಯುಪಿಎ ಅಭ್ಯರ್ಥಿಗೆ ಮೀರಾ ಕುಮಾರ ಸೋಲು ಕಂಡಿದ್ದರು. ಅದಕ್ಕಾಗಿ ಈ ಬಾರಿ ಅಭ್ಯರ್ಥಿ ಆಯ್ಕೆ ಸಂಬಂಧ ಆರಂಭದಲ್ಲೇ ಕಾಂಗ್ರೆಸ್ ಅಧ್ಯಕ್ಷೆ ಸಮಾಲೋಚನೆಗೆ ಇಳಿದಿದ್ದಾರೆ. ಕಾಂಗ್ರೆಸ್ ಜೊತೆ ತೃಣಮೂಲ ಕಾಂಗ್ರೆಸ್, ಎನ್‍ಸಿಪಿ, ಶಿವಸೇನೆ ಮತ್ತು ಎಡಪಕ್ಷಗಳ ಜೊತೆ ಚರ್ಚೆಗಳು ನಡೆದಿವೆ.ದೆಹಲಿ ಹಾಗೂ ಪಂಜಾಬ್‍ನಲ್ಲಿ ಅಧಿಕಾರ ಹಿಡಿದು ಗಮನಾರ್ಹ ಶಾಸಕರನ್ನು ಹೊಂದಿರುವ ಎಎಪಿ ಪಾತ್ರ ಕೂಡ ಈ ಬಾರಿ ಪ್ರಮುಖವಾಗಿದೆ. ತೆಲಂಗಾಣದ ಮುಖ್ಯಮಂತ್ರಿ ಮತ್ತು ಟಿಎಸ್‍ಆರ್ ಮುಖಂಡ ಕೆ.ಚಂದ್ರಶೇಖರ್ ರಾವ್ ಅವರು ತೃತೀಯ ರಂಗ ಬಲಗೊಳ್ಳುವ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ಒಂದು ವೇಳೆ ಯುಪಿಎ ಜೊತೆ ಹೊಂದಾಣಿಕೆ ಸಾಧ್ಯವಾಗದೆ ಇದ್ದರೆ ತೃತೀಯ ರಂಗದಿಂದ ಮಾಜಿ ಪ್ರಧಾನಿ ದೇವೇಗೌಡರು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ ಚಂದ್ರಶೇಖರ್ ರಾವ್ ಅವರು ದೇವೇಗೌಡರ ಜೊತೆ ಈ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.ಎನ್‍ಸಿಪಿ ನಾಯಕ ಶರದ್ ಪವಾರ್ ಸೇರಿದಂತೆ ಹಲವು ನಾಯಕರು ರಾಷ್ಟ್ರಪತಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆಡಳಿತಾರೂಢ ಬಿಜೆಪಿ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಸೇರಿ ಒಟ್ಟು ಸಂಸತ್ ಸದಸ್ಯರ ಸಂಖ್ಯೆ 772ರಷ್ಟಿದೆ. ಬಿಜೆಪಿ ಸ್ವಂತವಾಗಿ ಶೇ.42ರಷ್ಟು, ಮೈತ್ರಿ ಪಕ್ಷಗಳು ಶೇ.6ರಷ್ಟು ಸೇರಿ ಶೇ.48ರಷ್ಟು ಮತಗಳನ್ನು ಹೊಂದಿವೆ.

ಕಾಂಗ್ರೆಸ್ ಸ್ವಂತ ಶೇ.13.5ರಷ್ಟು ಸೇರಿ ಯುಪಿಎ ಶೇ.24ರಷ್ಟು ಸಂಖ್ಯಾಬಲವನ್ನು ಹೊಂದಿದೆ. ಯುಪಿಎ ಜೊತೆ ಡಿಎಂಕೆ, ಶಿವಸೇನೆ, ಎನ್‍ಸಿಪಿ, ಜೆಎಂಎಂ ಸೇರಿ ಹಲವು ಸಣ್ಣ ಪಕ್ಷಗಳು ಒಗ್ಗೂಡಿವೆ. ಮುಸ್ಲಿಂಲೀಗ್, ವಿಸಿಕೆ, ಆರ್‍ಎಸ್‍ಪಿ ಮತ್ತು ಎಂಡಿಎಂಕೆ ಒಟ್ಟುಗೂಡಿದರೆ ಶೇ.10.5ರಷ್ಟು ಸಂಖ್ಯಾಬಲವಾಗಲಿದೆ.ತೃಣಮೂಲ ಕಾಂಗ್ರೆಸ್ ಶೇ.5.4ರಷ್ಟು, ವೈಎಸ್‍ಆರ್‍ಸಿಪಿ ಶೇ.4ರಷ್ಟು, ಬಿಜೆಪಿ ಶೇ.2.85ರಷ್ಟು, ಎಡ ಪಕ್ಷಗಳು ಶೇ.2.5ರಷ್ಟು ಸೇರಿ ಶೇ.12ರಷ್ಟು ಮತಗಳ ಕೂಟ ಹೊಂದಿದೆ. ಪ್ರತಿಸಂಸದರ ಒಂದು ಮತ 700 ಅಂಕವೆಂದು ಲೆಕ್ಕ ಹಾಕಲಾಗುತ್ತದೆ. ಒಟ್ಟು ಸಂಸದರ ಮತಗಳ ಅಂಕಗಳು 5,43,200, ಶಾಸಕರ ಮತಗಳು 5,43,231 ಸೇರಿ ಒಟ್ಟು 10,86,431 ಅಂಕಗಳೆಂದು ಲೆಕ್ಕಚಾರ ಹಾಕಲಾಗುತ್ತದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button