ರಾಮನಗರ ಜಲಪ್ರಳಯ ಸಂಚಾರ ಅಸ್ತವ್ಯಸ್ತ

ರಾಜ್ಯದ ಬಹುತೇಕ ಭಾಗಗಳಲ್ಲಿ ಧಾರಾಕಾರ ವರ್ಷಧಾರೆಯಿಂದಾಗಿ ಜನರು ಕಂಗಾಲಾಗಿದ್ದಾರೆ. ಅದರಲ್ಲೂ ರೇಷ್ಮೆನಾಡು ರಾಮನಗರ ಜಿಲ್ಲೆಯಲ್ಲಿ ೨ ದಶಕಗಳ ಅವಧಿಯಲ್ಲೇ ಇದೇ ಮೊದಲ ಬಾರಿಗೆ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದ್ದು, ವಾಹನ ಸಂಚಾರ ಮತ್ತು ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಕೊಪ್ಪಳದಲ್ಲಿ ಬಾಲಕನೋರ್ವ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ರಾಮನಗರದಲ್ಲಿ ಮರ ಉರುಳಿ ಬಿದ್ದು, ೫೦ ವರ್ಷದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ.
ಮಳೆಯಿಂದಾಗಿ ಹಸುವೊಂದು ಅರ್ಕಾವತಿ ನೀರಿನಲ್ಲಿ ಕೊಚ್ಚಿ ಹೋಗಿದೆ.ಸೆ. ೨ರವರೆಗೆ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿ ಸಮುದ್ರದ ಮಧ್ಯಭಾಗ ಹಾಗೂ ಕೇರಳ ಸಮುದ್ರ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದ್ದು, ಇದರ ತೀವ್ರತೆ ಹೆಚ್ಚಾಗಿರುವ ಕಾರಣ ಮುಂದಿನ ೫ ದಿನದವರೆಗೆ ಮಳೆಯಾಗಲಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಚಿಕ್ಕಮಗಳೂರು, ಶಿವಮೊಗ್ಗ. ರಾಮನಗರ ಸೇರಿದಂತೆ ಬಹುತೇಕ ಎಲ್ಲ ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ವರುಣ ಅಬ್ಬರಿಸಲಿದ್ದಾನೆ.
ಈ ಹಿನ್ನೆಲೆಯಲ್ಲಿ ಸೆ. ೧ರ ವರೆಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.ರಾಮನಗರ ಜಿಲ್ಲೆಯಲ್ಲಿ ವರುಣನ ಅಬ್ಬರ ಕಂಡು ಕೇಳರಿಯದ ರೀತಿಯಲ್ಲಿ ಅಬ್ಬರಿಸಿದ್ದಾನೆ. ಎರಡು ದಶಕಗಳಲ್ಲೇ ಮಳೆಯಿಂದಾಗಿ ಇಂತಹ ಅನಾಹುತ ಸಂಭವಿಸಿರಲಿಲ್ಲ. ಕಣ್ವಾ ಜಲಾಶಯ ಭರ್ತಿಯಾಗಿದ್ದು, ಕೆರೆ-ಕಟ್ಟೆಗಳು ಉಕ್ಕಿ ಹರಿದು ಬೆಂಗಳೂರು-ಮೈಸೂರು ಹೆದ್ದಾರಿ ಹೊಳೆಯಂತಾಗಿದೆ.
ಧಾರಾಕಾರ ಮಳೆಯಿಂದಾಗಿ ರಾಮನಗರದಲ್ಲಿ ಸಾಮಾನ್ಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ. ವಾಹನಗಳು ನೀರಿನಲ್ಲಿ ಮುಳುಗಿದ್ದು, ಎದೆ ಮಟ್ಟದಲ್ಲಿ ನೀರು ನಿಂತಿದೆ.ರಾಮನಗರ ತಾಲ್ಲೂಕಿನ ಬಿಳಗುಂಬ ಅಂಡರ್ಪಾಸ್ನಲ್ಲಿ ಇಂದು ಬೆಳಿಗ್ಗೆ ಖಾಸಗಿ ಬಸ್ ಮಳೆ ನೀರಿನ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದೆ.
ಸ್ಥಳೀಯರು ನೆರವಿಗೆ ಧಾವಿಸಿ ಬಸ್ನಲ್ಲಿದ್ದ ೫೦ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಉದಯರಂಗ ಹೆಸರಿನ ಈ ಬಸ್ ಬೆಂಗಳೂರಿನಿಂದ ಮಳವಳ್ಳಿಗೆ ಹೊರಟಿತ್ತು. ಬಸ್ನ ಅರ್ಧಮಟ್ಟಕ್ಕೆ ನೀರು ನಿಂತಿದ್ದು, ಮುಂದೆ ಚಲಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಸ್ನಲ್ಲಿದ್ದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಸಾರ್ವಜನಿಕರು ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ರಾಮನಗರದ ಹನುಮಂತನಗರದಲ್ಲಿ ಹಲವು ಮನೆಗಳು ಜಲಾವೃತಗೊಂಡಿದ್ದು, ಕುಟುಂಬ ಸದಸ್ಯರು, ನಿಂತ ನೀರಿನಲ್ಲೇ ಪರದಾಡುವಂತಾಗಿದ್ದು, ಮನೆಯಿಂದ ಹೊರಬರಲಾರದ ಪರಿಸ್ಥಿತಿ ನಿಮಾರ್ಣವಾಗಿದೆ. ಮನೆಯಲ್ಲಿದ್ದ ಪಾತ್ರೆ, ಪಗಡೆಗಳು, ದವಸ ಧಾನ್ಯಗಳು ನೀರಿನಲ್ಲಿ ತೇಲಾಡುತ್ತಿವೆ.ಜಿಲ್ಲೆಯಾಂದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ರೈಲು ನಿಲ್ದಾಣ ಜಲಾವೃತಗೊಂಡಿದ್ದು, ಮೈಸೂರು-ಬೆಂಗಳೂರು ನಡುವಣ ಸಂಚಾರ ಸ್ಥಗಿತಗೊಂಡಿದೆ.
ಸಂಗಣ ಬಸವನ ದೊಡ್ಡಿ ಬಳಿ ಹೆದ್ದಾರಿಯ ಅಂಡರ್ಪಾಸ್ನಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದು, ಬಸ್ ಮತ್ತು ಕಾರುಗಳು ಮುಳುಗಿ ಹೋಗಿದ್ದು, ಕಿ.ಮೀ.ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿದೆ. ವ್ಯಾಪಕ ಮಳೆಯಿಂದಾಗಿ ರಾಮನಗರ ಹಾಗೂ ಚೆನ್ನಪಟ್ಟಣ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲೆಯ ಹಲವುಭಾಗಗಳಲ್ಲಿ ಧಾರಾಕಾರ ಮಳೆಯಿಂದಾಗಿ ಜನರು ಹೈರಾಣಾಗಿದ್ದಾರೆ.ಚಾಮರಾಜನಗರ ತಾಲ್ಲೂಕಿನ ಶಿರಸೂರು ಗ್ರಾಮದಲ್ಲಿ ಅಂಗಡಿ ಹಾಗೂ ೧೦ ಮನೆಗಳಿಗೆ ನೀರು ನುಗ್ಗಿ ರಾದ್ಧಾಂತ ಸೃಷ್ಟಿಯಾಗಿದೆ. ಕೃಷಿ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಮಳೆಯಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮೈಸೂರಿನ ಹಲವೆಡೆ ಮಳೆ ಬೀಳುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.ಮಂಡ್ಯ, ಚಾಮರಾಜನಗರ, ಕೊಪ್ಪಳ, ಕೊಡಗು, ಮಂಗಳೂರು ಜಿಲ್ಲೆಗಳಲ್ಲಿ ತಡರಾತ್ರಿಯಿಂದಲೇ ಮಳೆಯಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ವಯನಾಡಿನ ವಯಸ್ವಿನಿ ನದಿ ತೀರದ ಮನೆಗಳು ಜಲಾವೃತಗೊಂಡಿವೆ.ಮತ್ತೊಂದೆಡೆ ಭಾಗಮಂಗಲ, ತ್ರಿವೇಣಿ ಸಂಗಮ ಜಲಾವೃತಗೊಂಡಿವೆ, ಭಾಗಮಂಗಲ-ನಾಪೋಕ್ಲು ರಸ್ತೆ ಕಡಿತಗೊಂಡಿದೆ.
ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ೧೦ನೇ ಮೈಲು ಬಳಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.ಇನ್ನೂ ೩-೪ ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಪರ್ಯಾಯ ಮಾರ್ಗಕ್ಕೆ ಸಿಎಂ ಸೂಚನೆಭಾರಿ ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅವಾಂತರ ಸೃಷ್ಟಿಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ.
ಹೆದ್ದಾರಿಯಲ್ಲಿ ನೀರು ನಿಂತಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗ ಅನುಸರಿಸಲು ಜಿಲ್ಲಾ ಎಸ್ಪಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಂಭವಿಸಿರುವ ಅನಾಹುತಗಳ ಬಗ್ಗೆ ೧೬ ಜಿಲ್ಲೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಸ್ಥಿತಿ ಸರಿಪಡಿಸಲು ಸೂಚನೆ ನೀಡುವುದಾಗಿ ತಿಳಿಸಿದರು.
ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಂತಿರುವ ನೀರನ್ನು ತೆರವುಗೊಳಿಸಲು ಸೂಚನೆ ನೀಡಿದ್ದೇನೆ. ಮೈಸೂರು ಜಿಲ್ಲಾಧಿಕಾರಿ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲೂ ಪರಿಸ್ಥಿತಿ ನಿಭಾಯಿಸುವಂತೆ ಸೂಚಿಸುವುದಾಗಿ ಹೇಳಿದರು.
ಮಳೆಯಿಂದಾಗಿ ಕೆರೆ-ಕಟ್ಟೆಗಳಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಲು ಅವುಗಳ ಮೇಲೆ ನಿಗಾ ವಹಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ.
ಮಳೆಯಿಂದಾಗಿ ಮಳೆ ಕಳೆದುಕೊಂಡವರಿಗೆ ಪರಿಹಾರ ನೀಡಲು ಸೂಚಿಸಿರುವುದಾಗಿ ಬೊಮ್ಮಾಯಿ ತಿಳಿಸಿದರು.