ರಾಜ್ಯ

ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳ ಬದಿ ಕಟ್ಟಡ ಅಂಕುಶಕ್ಕೆ ನಿಯಮ: ಸಚಿವ ಸಿ.ಸಿ.ಪಾಟೀಲ

ಬೆಂಗಳೂರು: ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳ ಅಕ್ಕಪಕ್ಕ ಅನಧಿಕೃತ ಕಟ್ಟಡಗಳನ್ನು ನಿರ್ಮಿಸದಂತೆ ತಡೆಗಟ್ಟಲು ಲೋಕೋಪಯೋಗಿ ಇಲಾಖೆಯಿಂದ ಸ್ಪಷ್ಟ ನಿಯಮ ಜಾರಿಗೆ ತರಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಅವರು ನೀಡಿರುವ ಮಾಧ್ಯಮ ಪ್ರಕಟಣೆಯಲ್ಲಿ, ಹೆದ್ದಾರಿಗಳ ಅಕ್ಕಪಕ್ಕ ಕಟ್ಟಡ ನಿರ್ಮಾಣದಲ್ಲಿ ಕನಿಷ್ಠ ಎಷ್ಟು ಪ್ರಮಾಣದ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮ ಅಳವಡಿಸಲಾಗಿದೆ ಎಂಬ ವಿವರಗಳನ್ನು ನೀಡಿದ್ದಾರೆ.
ಈ ನಿಬಂಧನೆಗಳನ್ನು ಪಾಲಿಸುವುದರಿಂದ ರಸ್ತೆಗಳಲ್ಲಿ ಅತಿಕ್ರಮಣ ತಡೆಯಲು ಸಹಾಯಕವಾಗಿ, ವಾಹನ ಸಂಚಾರ ಸುಗಮವಾಗುವುದಲ್ಲದೇ, ಅಪಘಾತಗಳ ಪ್ರಮಾಣವನ್ನು ಕಡಿಮೆಗೊಳಿಸಲು ಸಾಧ್ಯವಾಗಲಿದೆ ಎಂದಿದ್ದಾರೆ.

ಈ ನಿಯಮದನ್ವಯ ರಾಜ್ಯ ಹೆದ್ದಾರಿಗಳ ಮಧ್ಯಭಾಗದಿಂದ 40 ಮೀಟರ್ ಅಂತರದವರೆಗೆ ಯಾವುದೇ ಕಟ್ಟಡ ಅಥವಾ ಅಂಗಡಿಗಳನ್ನು ನಿರ್ಮಿಸುವಂತಿಲ್ಲ. ಜಿಲ್ಲಾ ಮುಖ್ಯರಸ್ತೆಗಳ ಮಧ್ಯಭಾಗದಿಂದ 25 ಮೀಟರ್ ಅಂತರದವರೆಗೆ ಯಾವುದೇ ಕಟ್ಟಡ ನಿರ್ಮಿಸುವುದಕ್ಕೆ ಅವಕಾಶವಿಲ್ಲ. ಅಲ್ಲದೇ ಸಿಟಿ ಕಾರ್ಪೊರೇಷನ್, ಸಿಟಿ ಮುನ್ಸಿಪಲ್ ಕೌನ್ಸಿಲ್, ಟೌನ್ ಮುನ್ಷಿಪಲ್ ಕೌನ್ಸಿಲ್, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಪರಿಮಿತಿಗಳಲ್ಲಿ ಈ ಅಂತರವನ್ನು ರಾಜ್ಯ ಹೆದ್ದಾರಿಯ ದಾಖಲಿತ ರಸ್ತೆ ಭೂಗಡಿಯ ಅಂಚಿನಿಂದ ಕನಿಷ್ಠ 6 ಮೀಟರ್ ಅನ್ನು ಕಾಯ್ದುಕೊಳ್ಳಬೇಕು ಹಾಗೂ ಸಿಟಿ ಕಾರ್ಪೊರೇಷನ್ ಪರಿಮಿತಿಯಿಂದ 15 ಕಿ.ಮೀ. ದೂರದವರೆಗೆ 12 ಮೀಟರ್ ಅಂತರ ಪಾಲಿಸುವುದು ಕಡ್ಡಾಯವಾಗಿದೆ.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರುಗಳನ್ನು ಹೆದ್ದಾರಿ ಪ್ರಾಧಿಕಾರಿ ಎಂದು ಘೋಷಿಸಲಾಗಿದ್ದು, ರಸ್ತೆಯಿಂದ ಕಟ್ಟಡಗಳ ಅಂತರ ನಿಗದಿಪಡಿಸುವುದು ಹಾಗೂ ರಸ್ತೆ ಗಡಿಯನ್ನು ನಿಗದಿಪಡಿಸುವುದು ಅವರ ಜವಾಬ್ದಾರಿಯಾಗಿರುತ್ತದೆ ಎಂದು ಸಿ.ಸಿ.ಪಾಟೀಲರು ವಿವರಿಸಿದ್ದಾರೆ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button