ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ಪರ್ವ ಶುರು

ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸುವ ಲಕ್ಷಣಗಳು ಕಂಡುಬರುತ್ತಿದೆ. 2023ರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳಷ್ಟೆ ಬಾಕಿಯಿದ್ದು, ಹೊಸ ವರ್ಷದ ನಂತರ ಪಕ್ಷಾಂತರ ಪರ್ವ ಮುನ್ನಲೆಗೆ ಬರುವ ಸಾಧ್ಯತೆಯಿದ್ದು, ಪ್ರಮುಖ ಮೂರು ಪಕ್ಷಗಳಲ್ಲಿ ಬೇರೆ ಪಕ್ಷ ಸೇರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ರಾಜ್ಯದ ಮತದಾರರ ಮನವೊಲಿಸಲು ಸಾಕಷ್ಟು ಕಸರತ್ತುಗಳಲ್ಲಿ ತೊಡಗಿದೆ. ಸಂಕ್ರಾಂತಿ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ಬಿಜೆಪಿಗೆ, ಬಿಜೆಪಿ ಹಾಗೂ ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಜೆಡಿಎಸ್‍ಗೆ ಒಂದಷ್ಟು ಶಾಸಕರು, ಮುಖಂಡರ ವಲಸೆಗೆ ಮಹೂರ್ತ ನಿಗದಿಯಾಗಿದೆ.
ಮೂರೂ ಪಕ್ಷಗಳಲ್ಲಿ ಜಿಗಿತ ಆಗಲಿದೆ. ಈಗಾಗಲೇ ಹಾಲಿ, ಮಾಜಿ ಶಾಸಕರು ಸುರಕ್ಷಿತ ಕ್ಷೇತ್ರಗಳತ್ತ ಚಿತ್ತಹರಿಸಿದ್ದಾರೆ.ತತ್ವ, ಸಿದ್ಧಾಂತ ಯಾವುದನ್ನೂ ಲೆಕ್ಕಿಸದೇ ಗೆಲ್ಲುವುದನ್ನೇ ಮಾನದಂಡವಾಗಿಟ್ಟುಕೊಂಡಿರುವ ಅನೇಕರು ತಮಗೆ ಸುರಕ್ಷಿತ ಎನಿಸಿದ ಪಕ್ಷಗಳತ್ತ ವಲಸೆ ಹೋಗುತ್ತಿದ್ದಾರೆ.ಈ ಬಾರಿ ಅಧಿಕಾರ ಹಿಡಿಯಲೇಬೇಕೆಂದು ಪಣತೊಟ್ಟಿರುವ ಪ್ರತಿಪಕ್ಷ ಕಾಂಗ್ರೆಸ್‍ನತ್ತ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ವಲಸೆ ಹೋಗುತ್ತಿದ್ದರೆ, ತೆನೆ ಹೊತ್ತ ಮಹಿಳೆ ಕೂಡ ಅನ್ಯ ಪಕ್ಷಗಳ ಅತೃಪ್ತರಿಗೆ ಗಾಳ ಹಾಕಿದೆ.
ಈ ನಡುವೆ ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ಒಂದಷ್ಟು ಶಾಸಕರು, ನಾಯಕರು ಭಿನ್ನಾಭಿಪ್ರಾಯ ಹೊಂದಿದ್ದು, ತಮ್ಮ ಪಕ್ಷದ ವಿರುದ್ಧವೇ ಹರಿಹಾಯ್ದವರು ಸದ್ಯಕ್ಕೆ ಮËನಕ್ಕೆ ಶರಣಾಗಿದ್ದಾರೆ. ಬಿಜೆಪಿಯಲ್ಲಿಯೂ ಒಂದಷ್ಟು ಆಕ್ರೋಶಿತ ನಾಯಕರಿದ್ದಾರೆ.
ಆದರೆ ಇವರೆಲ್ಲರೂ ಇದೀಗ ಮೌನಕ್ಕೆ ಶರಣಾಗಿದ್ದಾರೆ.ಈಗಾಗಲೇ ತಮ್ಮ ಪಕ್ಷದ ಮತ್ತು ನಾಯಕರ ಮೇಲೆ ಭಿನ್ನಾಭಿಪ್ರಾಯಗಳನ್ನು ಹೊಂದಿರುವವರೆಲ್ಲರೂ ಸಾಮಾನ್ಯವಾಗಿ ಸೆಟೆದು ನಿಲ್ಲುವುದು ಚುನಾವಣೆ ಹತ್ತಿರ ಬಂದಾಗಲೇ.
ಏಕೆಂದರೆ ಕೆಲವು ಅವಕಾಶವಾದಿ ನಾಯಕರು ಪಕ್ಷಕ್ಕಿಂತ ತಮಗೆ ಯಾರು ಅವಕಾಶ ಕೊಡುತ್ತಾರೋ ಅವರಿಗೆ ನಿಷ್ಠಾವಂತರಾಗಿರುತ್ತಾರೆ.ತಾವಿರುವ ಪಕ್ಷ ಈ ಬಾರಿ ಅಧಿಕಾರಕ್ಕೆ ಬರುವ ವಾತಾವರಣವಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ ಅಧಿಕಾರಕ್ಕೆ ಬರುವ ಲಕ್ಷಣವಿರುವ ಪಕ್ಷಗಳತ್ತ ಮುಖಮಾಡಿ ಅಲ್ಲಿಂದ ಗೆದ್ದು ಅಧಿಕಾರ ಪಡೆಯುವುದು ಕೆಲವರ ರಾಜಕೀಯದ ವರಸೆಯಾಗಿದೆ.
ಇನ್ನು ಪಕ್ಷ ನಿಷ್ಠೆ ಮೆರೆಯುತ್ತಾ ಐದಾರು ಬಾರಿ ತಮ್ಮ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾ ಬಂದಿದ್ದರೂ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ ತಮಗೆ ಸಚಿವ ಸ್ಥಾನ ಸಿಗದಿದ್ದರೂ ಮತ್ತೆ ಪಕ್ಷದಲ್ಲಿಯೇ ಮುಂದುವರೆಯುತ್ತಿರುವ ಶಾಸಕರು ಇಲ್ಲ ಅನ್ನುವಂತಿಲ್ಲ.
ತಳಮಟ್ಟದಿಂದ ಬಂದು ಒಂದೊಂದೇ ಹಂತವನ್ನೇರಿ ಪಕ್ಷದಲ್ಲಿ ಉಳಿದಿರುವ ಹಲವು ನಾಯಕರು ತಮ್ಮ ಆಕ್ರೋಶವಿದ್ದರೂ ಪಕ್ಷದಲ್ಲಿಯೇ ಉಳಿದು ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಮುನ್ನಡೆಯುತ್ತಿದ್ದಾರೆ.ಇನ್ನು ಹಲವು ನಾಯಕರು ಪಕ್ಷದಲ್ಲಿ ಪ್ರಭಾವಿಗಳಾಗಿರುವುದರಿಂದ ಕ್ಷೇತ್ರ ಬದಲಾಯಿಸಿ ಮತ್ತೊಂದು ಕ್ಷೇತ್ರದಲ್ಲಿ ಗೆಲುವು ಪಡೆಯುವ ತಾಕತ್ ಹೊಂದಿದ್ದಾರೆ.
ಅಂಥವರು ಪ್ರತಿ ಬಾರಿ ಅಧಿಕಾರ ಅನುಭವಿಸುತ್ತಲೇ ಇದ್ದಾರೆ.ಇದೆಲ್ಲದರ ನಡುವೆ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಿಂದ ಹಿಂದೂ ಕಾರ್ಯಕರ್ತರು, ಮುಖಂಡರು ಪಕ್ಷದ ವಿರುದ್ಧ ತಿರುಗಿ ಬಿದ್ದಿರುವುದು ಬಿಜೆಪಿಯಲ್ಲಿ ತಲ್ಲಣವನ್ನುಂಟು ಮಾಡಿದೆ.ಹಿಂದುತ್ವದ ಭದ್ರ ಬುನಾದಿಯಲ್ಲಿ ಸೃಷ್ಟಿಯಾದ ಬಿಜೆಪಿ ಪಕ್ಷವು ಇತ್ತೀಚೆಗಿನ ವರ್ಷಗಳಲ್ಲಿ ಕೇವಲ ಅಧಿಕಾರಕ್ಕಾಗಿ ತಮ್ಮ ಸಿದ್ಧಾಂತವನ್ನು ಬದಿಗೊತ್ತಿ ಅಧಿಕಾರ ಹಿಡಿದಿದ್ದು, ಅಧಿಕಾರಕ್ಕೆ ಬಂದ ಬಳಿಕ ಕಾರ್ಯಕರ್ತರನ್ನು ಮರೆತು ಮೆರೆದಿದ್ದು ಇವತ್ತಿನ ಪರಿಸ್ಥಿತಿಗೆ ಕಾರಣವಾಗಿದೆ.
ಬೇರೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದ ಕೆಲವು ನಾಯಕರು ಮುಂದಿನ ಚುನಾವಣೆ ಹೊತ್ತಿಗೆ ಬಿಜೆಪಿಯತ್ತ ಮುಖ ಮಾಡುವ ಆಲೋಚನೆ ಮಾಡಿದ್ದರು. ಆದರೆ ಬಿಜೆಪಿಯಲ್ಲಿನ ಬೆಳವಣಿಗೆ ಅವರು ಕಾದು ನೋಡುವ ತಂತ್ರ ಅನುಸರಿಸುವಂತೆ ಮಾಡಿದೆ.ಸದ್ಯಕ್ಕೆ ಮಂಕಾಗಿರುವ ಬಿಜೆಪಿಗೆ ಚುರುಕು ಮುಟ್ಟಿಸಲೆಂದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಂದು ಹೋಗಿದ್ದಾರೆ.
ಮುಂದಿನ ಬೆಳವಣಿಗೆಗಳು ಹೇಗಿವೆಯೋ ಗೊತ್ತಿಲ್ಲ. ಈ ಹಿಂದೆಯಿದ್ದ ಸಮ್ಮಿಶ್ರ ಸರ್ಕಾರದಿಂದ ಸಿಡಿದೆದ್ದು ಬಂದ ಶಾಸಕರು ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿಯಲ್ಲಿಯೇ ಇರುತ್ತಾರಾ? ಅಥವಾ ಪಕ್ಷ ನಿಷ್ಠೆ ಬದಲಾಯಿಸುತ್ತಾರೋ ಗೊತ್ತಿಲ್ಲ.ಕಾಂಗ್ರೆಸ್‍ನಿಂದ ಬಂದ ಶಾಸಕರು ಬಿಜೆಪಿ ಸೇರ್ಪಡೆಗೊಂಡ ಬಳಿಕ ಯಾವುದೇ ಕ್ಯಾತೆ ತೆಗೆಯದೆ ಕೆಲಸ ಮಾಡುತ್ತಿದ್ದಾರೆ.
ಆದರೆ ಮೂಲ ಬಿಜೆಪಿಗರ ಪೈಕಿ ಕೆಲವು ಶಾಸಕರಿಗೆ ಸಚಿವ ಸ್ಥಾನ ಸಿಗದ ಅಸಮಾಧಾನವಿದ್ದರೂ ಕೂಡ ಮೇಲ್ನೋಟಕ್ಕೆ ತಣ್ಣಗೆ ಆದಂತೆ ಕಾಣುತ್ತಿದೆ. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ನಲ್ಲಿ ಅಸಮಾಧಾನಗೊಂಡ ಶಾಸಕರು ಬಿಜೆಪಿಯತ್ತ ಒಲವು ತೋರಿದ್ದರಾದರೂ ಈಗಿನ ಬೆಳವಣಿಗೆಯಲ್ಲಿ ಅವರು ಯಾವುದೇ ನಿರ್ಧಾರಕ್ಕೆ ಬಂದಂತೆ ಕಾಣುತ್ತಿಲ್ಲ.
ಅವರದ್ದೇನಿದ್ದರೂ ಈಗ ಕಾದು ನೋಡುವ ತಂತ್ರವಾಗಿದೆ.ಅರಸೀಕರೆ ಶಾಸಕ ಶಿವಲಿಂಗೇಗೌಡರು ಜೆಡಿಎಸ್ ನಾಯಕರೊಂದಿಗೆ ಸಂಬಂಧ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‍ನೊಂದಿಗೆ ಸಖ್ಯ ಹೊಂದಿದ್ದಾರೆ. ಆದರೆ ಅವರು ಕೂಡ ಸದ್ಯಕ್ಕೆ ಜೆಡಿಎಸ್ ಬಿಟ್ಟು ಹೊರ ಬಾರದೆ ಚುನಾವಣೆ ತನಕವೂ ಕಾಯುವ ತಂತ್ರದಲ್ಲಿದ್ದಾರೆ.
ಕಾಂಗ್ರೆಸ್ ನ ಮಾಜಿ ಸಚಿವ ಎಂ.ಆರ್.ಸೀತಾರಾಂ ಕೂಡ ಅಸಮಾಧಾನಗೊಂಡಿದ್ದಾರೆ. ಇಷ್ಟರಲ್ಲೇ ಕಾರ್ಯಕರ್ತರ ಸಭೆ ನಡೆಸಿರುವ ಅವರ ತೀರ್ಮಾನವೂ ಚುನಾವಣೆ ಹೊತ್ತಿಗೆ ಗೊತ್ತಾಗಲಿದೆ. ಇನ್ನು ಹಲವು ನಾಯಕರು ತಾವಿರುವ ಪಕ್ಷದಿಂದ ಒಂದು ಕಾಲನ್ನು ಹೊರಗಿಟ್ಟಿದ್ದಾರೆ.ಆದರೆ ಯಾರು? ಯಾವಾಗ? ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದಕ್ಕೆ ಇನ್ನೊಂದಷ್ಟು ದಿನ ಕಾದು ನೋಡಬೇಕಿದೆ.
ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಕಡೆ ವಲಸಿಗರ ಸಂಖ್ಯೆ ಹೆಚ್ಚುತ್ತಿದೆಯಾದರೂ ಮುಂದಿನ ದಿನಗಳಲ್ಲಿ ಯಾರ್ಯಾರು, ಯಾವ ಕಡೆ ಹೋಗುತ್ತಾರೆ? ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ಎಲ್ಲಾ ಶಾಸಕರಿಗೂ ಟಿಕೆಟ್ ಸಿಗುವ ಸಂಭವವಿದ್ದರೂ ಕೆಲವರು ಸೋಲಿನ ಭೀತಿಯಿಂದಾಗಿ ಕಾಂಗ್ರೆಸ್ ಕಡೆ ಜಿಗಿಯಲು ಹಾತೊರೆಯುತ್ತಿದ್ದಾರೆ.
ಚುನಾವಣೆ ಸಮೀಪಿಸುವವರೆಗೂ ಗುಟ್ಟು ರಟ್ಟು ಮಾಡದೆ ಕೊನೆ ಕ್ಷಣದಲ್ಲಿ ಟಿಕೆಟ್ ಖಚಿತವಾಗುತ್ತಿದ್ದಂತೆ ಪಕ್ಷ ಬದಲಿಸುವುದು ಇವರ ಮುಖ್ಯ ಉದ್ದೇಶ.2018ರ ವಿಧಾನಸಭೆ ಚುನಾವಣೆಯಲ್ಲಿ ಕಿಂಗ್‍ಮೇಕರ್ ಸ್ಥಾನ ಗಳಿಸಿದ ಜೆಡಿಎಸ್‍ಗೆ ಮುಂಬರುವ ಚುನಾವಣೆಯಲ್ಲಿ ಭಾರೀ ಹೊಡೆತ ಕೊಡುವ ಲಕ್ಷಣಗಳು ಗೋಚರಿಸಿವೆ.
2019ರ ಲೋಕಸಭೆ ಚುನಾವಣೆಯಿಂದ ಆರಂಭವಾಗಿರುವ ದಳಪತಿಗಳ ಅಧಃಪತನ ಈಗಲೂ ಕೂಡ ಮುಂದುವರೆದಿದೆ.ಪಕ್ಷದ ವರಿಷ್ಠ ದೇವೇಗೌಡ ಒಂದು ಕಡೆಯಾದರೆ, ಅಕಾರದ ಹಾಪಹಪಿಗೆ ಬಿದ್ದಿರುವ ಕುಮಾರಸ್ವಾಮಿ ತಪ್ಪು ನಿರ್ಧಾರಗಳಿಂದಾಗಿ ಅನೇಕ ಶಾಸಕರು ಬೇರೆ ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಅಂಬರೀಶ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಸೋತು ಪಕ್ಷ ಕೈ ಸುಟ್ಟುಕೊಂಡ ನಂತರ ಜೆಡಿಎಸ್‍ಗೆ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆವರೆಗೂ ಸಿಹಿಗಿಂತ ಕಹಿಯೇ ಜÁಸ್ತಿಯಾಗಿದೆ.ಇದೀಗ ಜೆಡಿಎಸ್‍ನ ಎಡವಟ್ಟಿನಿಂದಾಗಿ ಆ ಪಕ್ಷದ ಸಾಲು ಸಾಲು ನಾಯಕರು ಜೆಡಿಎಸ್ ಬಿಟ್ಟು ಹೊರಟಿದ್ದಾರೆ.
ಈಗಾಗಲೇ ಬಹುತೇಕ ಜೆಡಿಎಸ್‍ನಿಂದ ಸಂಬಂಧ ಕಳೆದುಕೊಂಡಿರುವ, ಅರಕಲಗೂಡಿನ ಎ. ಟಿ. ರಾಮಸ್ವಾಮಿ, ಅರಸೀಕೆರೆ ಶಿವಲಿಂಗೇಗೌಡ, ಬೇಲೂರಿನ ಲಿಂಗೇಶ್ ಸೇರಿದಂತೆ ಅನೇಕರು ದಳಪತಿಗಳಿಗೆ ಶಾಕ್ ನೀಡಲು ಮುಂದಾಗಿದ್ದಾರೆ.ವಿಶೇಷವೆಂದರೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‍ಗೆ ಏಟಿನ ಮೇಲೆ ಏಟು ಕೊಡುತ್ತಿರುವುದು ಕಾಂಗ್ರೆಸ್.
ಬಿಜೆಪಿಗೆ ಈ ಭಾಗದಲ್ಲಿ ಹೇಳಿಕೊಳ್ಳುವಂತಹ ನೆಲೆ ಇಲ್ಲ. ಹೀಗಾಗಿ ದಳಪತಿಗಳು ಹಳೆ ಮೈಸೂರಿನಲ್ಲಿ ಸಾಧ್ಯವಾದಷ್ಟು ಹೈಜಕ್ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಅಖಾಡಕ್ಕಿಳಿದಿದ್ದಾರೆ.
ಬಿಜೆಪಿಯಲ್ಲೂ ಇದೇ ಕಥೆ: ಆಡಳಿತಾರೂಢ ಬಿಜೆಪಿಯಲ್ಲು ಪರಿಸ್ಥಿತಿ ಭಿನ್ನವಾಗಿಲ್ಲ. ಆಪರೇಷನ್ ಕಮಲದಿಂದ ಪಕ್ಷ ತೊರೆದಿದ್ದ ಅನೇಕರು ಮತ್ತೆ ಮಾತೃಪಕ್ಷದತ್ತ ಮುಖ ಮಾಡುವ ಹವಣಿಕೆಯಲ್ಲಿದ್ದು, ಮಾಜಿ ಶಾಸಕ ಎ.ಮಂಜು ಈಗಾಗಲೇ ಕಾಂಗ್ರೆಸ್ ಬಾಗಿಲು ಬಡಿದಿದ್ದಾರೆ.