Uncategorized

ರಾಜ್ಯಸಭೆ ಚುನಾವಣೆ: ಪಕ್ಷೇತರ ಶಾಸಕರಿಗೆ ಭಾರೀ ಡಿಮ್ಯಾಂಡ್..!

ರಾಜ್ಯಸಭೆ ಚುನಾವಣೆಯಲ್ಲಿ ಒಂದೊಂದು ಮತವು ಮೂರು ರಾಜಕೀಯ ಪಕ್ಷಗಳಿಗೆ ನಿರ್ಣಾಯಕವಾಗಿರುವುದರಿಂದ ಮೂವರು ಪಕ್ಷೇತರ ಶಾಸಕರಿಗೆ ಭಾರೀ ಡಿಮ್ಯಾಂಡ್ ಬಂದಿದೆ.

ವಿಧಾನಸಭೆಯ ಒಟ್ಟು 224 ಸದಸ್ಯರಲ್ಲಿ ಮೂವರು ಪಕ್ಷೇತರ ಶಾಸಕರಿದ್ದಾರೆ.

ಎಚ್.ನಾಗೇಶ್(ಮುಳಬಾಗಿಲು), ಶರತ್ ಬಚ್ಚೇಗೌಡ(ಹೊಸಕೋಟೆ) ಹಾಗೂ ಎನ್.ಮಹೇಶ್(ಕೊಳ್ಳೆಗಾಲ) ಅವರಿಗೆ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ತಮ್ಮ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಗಾಳ ಬೀಸಿದ್ದಾರೆ.

ಈಗಾಗಲೇ ಎನ್.ಮಹೇಶ್ ಅವರು ಬಿಜೆಪಿ ಜೊತೆ ಗುರುತಿಸಿಕೊಂಡು 2023ರ ವಿಧಾನಸಭೆ ಚುನಾವಣೆಯಲ್ಲಿ ಕೊಳ್ಳೆಗಾಲದಿಂದ ಅವರಿಗೆ ಟಿಕೆಟ್ ಖಾತರಿಯಾಗಿದೆ.

ಅಲ್ಲದೆ ಸಚಿವ ಸಂಪುಟ ಪುನಾರಚನೆಯಾದರೆ ದಲಿತ ಕೋಟಾದಲ್ಲಿ ಅದೃಷ್ಟ ಖುಲಾಯಿಸಿದರೂ ಅಚ್ಚರಿ ಇಲ್ಲ.

ಒಂದು ಬಾರಿ ಅಬಕಾರಿ ಸಚಿವರಾಗಿ ಇದೀಗ ಅಂಬೇಡ್ಕರ್ ನಿಗಮ ಮಂಡಳಿ ಅಧ್ಯಕ್ಷರಾಗಿರುವ ಎಚ್.

ನಾಗೇಶ್ ಬಿಜೆಪಿ ಜೊತೆ ಹೆಚ್ಚಾಗಿ ಗುರುತಿಸಿಕೊಳ್ಳದಿದ್ದರೂ ಸದ್ಯಕ್ಕೆ ಅವರು ಅಡ್ಡ ಮತದಾನ ಚಲಾಯಿಸುವ ಸಾಧ್ಯ ಸಾಧ್ಯತೆಗಳು ತೀರಾ ಕಡಿಮೆ.ಏಕೆಂದರೆ ಸಂಪುಟ ದರ್ಜೆಯ ಸ್ಥಾನಮಾನ ಸಿಕ್ಕಿದ್ದು ಬಿಜೆಪಿಗೆ ಸೇರ್ಪಡೆಯಾಗುವುದಾದರೆ ಬೆಂಗಳೂರಿನಲ್ಲಿರುವ ಮೀಸಲು ಕ್ಷೇತ್ರದಿಂದ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ವರಿಷ್ಠರಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ರ್ಪಸಿ ಪರಾಭವಗೊಂಡಿದ್ದ ಹೊಸಕೋಟೆಯ ಶರತ್ ಬಚ್ಚೇಗೌಡ ಈಗಾಗಲೇ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ.

ಆದರೂ ಈ ಮೂವರು ಶಾಸಕರು ಪಕ್ಷೇತರರೆಂದೇ ಪರಿಗಣಿಸಲಾಗಿದೆ.ಎನ್.ಮಹೇಶ್ ಮತ್ತು ಎಚ್.ನಾಗೇಶ್ ಸದ್ಯಕ್ಕೆ ಬಿಜೆಪಿಗೆ ಕೈ ಕೊಡುವ ಲಕ್ಷಣಗಳು ಕಾಣುತ್ತಿಲ್ಲ.

ಆದರೆ ಕೆಲ ದಿನಗಳ ಹಿಂದೆ ನಾಗೇಶ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮುಂಬರುವ 2023ರ ಚುನಾವಣೆಯಲ್ಲಿ ಮುಳಬಾಗಿಲಿನಿಂದ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗುತ್ತಿದೆ.

ಒಂದು ವೇಳೆ ಟಿಕೆಟ್ ಭರವಸೆ ಸಿಕ್ಕರೆ ನಾಗೇಶ್ ಬಿಜೆಪಿಗೆ ಕೈ ಕೊಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಿಂತ ತಮ್ಮ ರಾಜಕೀಯ ಭವಿಷ್ಯ ಮುಖ್ಯ ಎಂಬುದು ಮನವರಿಕೆಯಾದರೆ ನಾಗೇಶ್ ಕಮಲ ಬಿಟ್ಟು ಕೈ ಹಿಡಿಯಬಹುದು.

ಸದ್ಯಕ್ಕೆ ಅಂತಹ ಬೆಳವಣಿಗೆಗಳು ತೀರಾ ಕಡಿಮೆ ಎನ್ನಲಾಗುತ್ತಿದೆ. ಕೊಳ್ಳೆಗಾಲದಲ್ಲಿ ಮಹೇಶ್‍ಗೆ ಟಿಕೆಟ್ ನೀಡುವುದಕ್ಕೆ ಸ್ಥಳೀಯರ ವಿರೋಧವಿದೆ.

ಈ ಕ್ಷೇತ್ರದಿಂದ ತಮಗೇ ಟಿಕೆಟ್ ಕೊಡಬೇಕೆಂದು ಮಾಜಿ ಶಾಸಕ ನಂಜುಂಡಸ್ವಾಮಿ ಒತ್ತಡ ಹಾಕಿದ್ದಾರೆ.ಆದರೆ ಕಷ್ಟ ಕಾಲದಲ್ಲಿ ಮಹೇಶ್ ಪಕ್ಷವನ್ನು ಕೈ ಹಿಡಿದಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಟಿಕೆಟ್ ಕೊಡಿಸುವ ಆಶ್ವಾಸನೆಯನ್ನು ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅವರು ಬಿಜೆಪಿಯನ್ನು ಮಹೇಶ್ ಬಲವಾಗಿ ಸಮರ್ಥಿಸಿಕೊಳ್ಳುತ್ತಿರುವುದು ಹಾಗೂ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಅವರ ನಿಷ್ಠೆ ಬಿಜೆಪಿ ಕಡೆ ಎನ್ನಲಾಗುತ್ತಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರಿಗೆ ಮಾತ್ರ ವಿಪ್ ಅನ್ವಯವಾಗುತ್ತದೆ. ಪಕ್ಷೇತರ ಶಾಸಕರಿಗೆ ಇದು ಅನ್ವಯವಾಗುವುದಿಲ್ಲ.

ಮತ ಚಲಾಯಿಸುವಾಗ ಅವರು ನಾವು ಯಾರಿಗೆ ಮತ ಹಾಕುತ್ತಿದ್ದೇವೆ ಎಂಬುದನ್ನು ಏಜೆಂಟರಿಗೆ ತೋರಿಸಬೇಕಾದ ಅಗತ್ಯವೂ ಇಲ್ಲ.

ತಮ್ಮ ವಿವೇಚನೆಗೆ ಅನುಗುಣವಾಗಿ ಯಾರಿಗೆ ಬೇಕಾದರೂ ಮತ ಹಾಕುವ ಸರ್ವ ಸ್ವತಂತ್ರ ಅವರಿಗಿದೆ.ರಾಜಕೀಯ ಪಕ್ಷದ ಚಿಹ್ನೆಯಡಿ ಗೆದ್ದ ಶಾಸಕರಿಗೆ ಮಾತ್ರ ವಿಪ್ ಅನ್ವಯವಾಗಲಿದೆ.

ಹೀಗಾಗಿ ಎನ್.ಮಹೇಶ್ ಮತ್ತು ನಾಗೇಶ್ ಅವರನ್ನು ಬಿಜೆಪಿ ತನ್ನ ಬಳಿ ಉಳಿಸಿಕೊಳ್ಳಲು ಎಲ್ಲ ಕಾರ್ಯತಂತ್ರವನ್ನು ರೂಪಿಸಿದೆ.

ಶರತ್ ಬಚ್ಚೇಗೌಡ ಕಳೆದ ಉಪಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದಿದ್ದರೂ ಈಗಾಗಲೇ ಅವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವವನ್ನು ಪಡೆದು ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಅವರಿಗೆ ಇದು ಅನ್ವಯವಾಗುವುದಿಲ್ಲ ಎನ್ನಲಾಗುತ್ತಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button