ರಾಜ್ಯದಲ್ಲಿ ಸೋಮವಾರದಿಂದ ಮಳೆಯ ಅಬ್ಬರ ತುಸು ತಗ್ಗುವ ಲಕ್ಷಣಗಳಿವೆ.

ರಾಜ್ಯದಲ್ಲಿ ಸೋಮವಾರದಿಂದ ಮಳೆಯ ಅಬ್ಬರ ತುಸು ತಗ್ಗುವ ಲಕ್ಷಣಗಳಿವೆ. ಆದರೆ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಿಗೆ ಬುಧವಾರದ ತನಕ ಭಾರಿ ಮಳೆಯ ‘ಆರೆಂಜ್ ಅಲರ್ಟ್’ ಇರಲಿದೆ. ಬುಧವಾರದ ಬಳಿಕ ಮಳೆ ಇನ್ನಷ್ಟು ಕಡಿಮೆಯಾಗಲಿದೆ.
ಬುಧವಾರದವರೆಗೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಉಳಿದಂತೆ ಹಾಸನ, ಶಿವಮೊಗ್ಗ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ಇರಲಿದೆ.
ಬುಧವಾರ ಬೆಳಗ್ಗೆ 8.30ರಿಂದ ಶುಕ್ರವಾರದವರೆಗೆ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಮಲೆನಾಡಿನ ಜಿಲ್ಲೆಗಳನ್ನು ಹೊರತು ಪಡಿಸಿದರೆ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಭಾನುವಾರದ ಹವಾಮಾನ ಮುನ್ಸೂಚನೆಯ ಪ್ರಕಾರ ಭಾರಿ ಮಳೆಯ ಸಾಧ್ಯತೆಗಳಿಲ್ಲ.
ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕಾಗಿತ್ತು. ಕೊಲ್ಲೂರು, ಭಾಗಮಂಡಲ ತಲಾ 16 ಸೆಂ.ಮೀ, ಉತ್ತರ ಕನ್ನಡದ ಸಿದ್ದಾಪುರ ಮತ್ತು ಕಾಸಲ್‌ರಾಕ್, ಕೊಡಗಿನ ಮೂರ್ನಾಡು, ಉಡುಪಿ ತಲಾ 11, ಮಂಗಳೂರು ವಿಮಾನ ನಿಲ್ದಾಣ, ಉಡುಪಿಯ ಕೋಟ, ಕೊಡಗಿನ ಸೋಮವಾರಪೇಟೆಯಲ್ಲಿ ತಲಾ 10 ಸೆಂ.ಮೀ. ಮಳೆಯಾಗಿದೆ.