
ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸುತ್ತೋಲೆ ಹೊರಡಿಸಿದೆ.
ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ರೋಗಗಳಿಗೆ ಅಗತ್ಯವಿರುವ ಔಷಧಗಳು, ಸಿಬ್ಬಂದಿ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದೆ. ಇಲಾಖೆ ಹೊರಡಿಸಿರುವ ಸುತ್ತೋಲೆಗಳು ಈ ಕೆಳಕಂಡಂತಿದೆ.
ಸಾಂಕ್ರಾಮಿಕ ರೋಗಗಳ ನಿರ್ವಹಣೆಗೆ ಉಲ್ಲೇಖಗಳ ಅನ್ವಯ ಸಮಗ್ರ ಕ್ರಿಯಾ ಯೋಜನೆಯು ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರಬೇಕು, ಅಗತ್ಯ ಮಾನವ ಸಂಪನ್ಮೂಲ, ಟೆಸ್ಟಿಂಗ್ ಕಿಟ್, ಔಷಧಗಳು, ರಾಸಾಯನಿಕ ಉಪಕರಣಗಳು ಹಾಗೂಪ್ರಮಾಣಿತ ಕಾರ್ಯಾಚರಣೆ ವಿಧಾನಗಳು ಅಗತ್ಯ ಪ್ರಮಾಣದಲ್ಲಿ ದೊರೆಯಬೇಕು ಎಂದು ಸೂಚನೆ ಕೊಡಲಾಗಿದೆ.
ಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಮತ್ತು ನಿರ್ವಹಣೆಯನ್ನು ಎನ್‍ಸಿಡಿಸಿ ಹಾಗೂ ಎನ್‍ಸಿವಿ ಅಡಿ ಭಾರತ ಸರ್ಕಾರ ಮತ್ತು ಈ ನಿರ್ದೇಶನಾಲಯದಿಂದ ಸೂಚಿಸಿರುವ ಪ್ರಮಾಣಿತ ಕಾರ್ಯಾಚರಣ ವಿಧಾನಗಳ ಅನ್ವಯ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ನಡೆಸಬೇಕು.
ಯಾವುದೇ ರೀತಿಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ತ್ವರಿತ ಪ್ರತಿಕ್ರಿಯಾ ತಂಡಗಳು ಅಗತ್ಯ ಔಷಧಗಳು, ಸಲಕರಣಿಗಳು ಹಾಗೂ ವಾಹನ ಸೌಲಭ್ಯದೊಂದಿಗೆ ಸನ್ನದ್ಧವಾಗಿರಬೇಕು,
ಪ್ರವಾಹ ಪೀಡಿತವಾಗುವಂತಹ ವಾರ್ಡ್‍ಗಳು/ ಗ್ರಾಮಗಳು ಸೂಕ್ಷ್ಮಯೋಜನೆ ಸಿದ್ಧಪಡಿಸಿಟ್ಟುಕೊಂಡು ತುರ್ತು ಪರಿಸ್ಥಿತಿಗೆ ಶೀಘ್ರವಾಗಿ ಸ್ಪಂದಿಸುವುದು.
ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ / ನಗರ ಆರೋಗ್ಯ ಕೇಂದ್ರ ಮುನ್ನೆಚ್ಚರಿಕೆ ಕ್ರಮವಾಗಿ ರೋಗ ನಿರ್ದಿಷ್ಟ ಸರ್ವೇಕ್ಷಣೆಯನ್ನು (ಸಕ್ರಿಯ ಹಾಗೂ ಸ್ಥಿತ) ಹೆಚ್ಚಿಸುವುದು.
ತಾಲೂಕು ವೈದ್ಯಾಧಿಕಾರಿಗಳು, ಅಗತ್ಯ ದತ್ತಾಂಶವನ್ನು ವಿಶ್ಲೇಷಿಸಿ, ರೋಗ ಪ್ರಸರಣವನ್ನು ಪತ್ತೆಹಚ್ಚಿ ತುರ್ತು ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಸೂಚಿಸಬೇಕೆಂದು ನಿರ್ದೇಶನ ನೀಡಲಾಗಿದೆ.
ಕೀಟಶಾಸ್ತ್ರೀಯ ಸೂಚ್ಯಂಕಗಳನ್ನು ಮುಂಚಿತವಾಗಿಯೇ ವಿಶ್ಲೇಷಿಸಿ, ಉಲ್ಬಣಿಸಬಹುದಾದ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು, ಮುಖ್ಯ ಆರೋಗ್ಯಾಕಾರಿಗಳು ಬಿಬಿಎಂಪಿ / ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ರಮವಾಗಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತಗಳಿಂದ ಅಗತ್ಯ ಸಹಕಾರವನ್ನು ಪಡೆಯಬೇಕೆಂದು ಸೂಚಿಸಲಾಗಿದೆ.
ಆರೋಗ್ಯ ಇಲಾಖೆಯೂ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸರ್ವೇಕ್ಷಣಾ ಚಟುವಟಿಕೆಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಪರಿಸ್ಥಿತಿಯ ಕುರಿತು ಆಯುಕ್ತಾಲಯಕ್ಕೆ ನಿಗದಿತವಾಗಿ ಮಾಹಿತಿ ನೀಡಬೇಕು.
ಪ್ರವಾಹದ ಸಮಯ / ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳನ್ನು ಮನದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯನ್ನು ನಡೆಸಿ, ಅಗತ್ಯ ಸಹಕಾರ ಪಡೆಯಬೇಕು.
ಈ ಮೇಲಿನ ಎಲ್ಲಾ ಅಂಶಗಳ ಅನುಷ್ಠಾನದ ಉಸ್ತುವಾರಿ ಹಾಗೂ ಮೇಲ್ವಿಚಾರಣೆಗಾಗಿ ಮತ್ತು ಸಮನ್ವಯ್ನ ಸಾಧಿಸಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಬೇಕು.
ಸಾಮಾನ್ಯವಾಗಿ ಪ್ರವಾಹವು ಕಡಿಮೆಯಾಗುವ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುವ ಸಾಧ್ಯತೆ ಇರುವುದರಿಂದ, ಪರಿಸ್ಥಿತಿಯು ಸಾಮಾನ್ಯವಾಗುವರೆಗೂ ಸರ್ವೇಕ್ಷಣೆ ಹಾಗೂ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅಗತ್ಯವಾಗಿದೆ.
ಒಟ್ಟಾರೆಯಾಗಿ, ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಅಗತ್ಯ ಪ್ರಯತ್ನಗಳನ್ನು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ರಂದೀಪ್ ಡಿ. ಸುತ್ತೋಲೆಯಲ್ಲಿ ಸೂಚನೆ ನೀಡಿದ್ದಾರೆ.