ರಾಜ್ಯದಲ್ಲಿ ಮೋದಿ, ಶಾ ಆಟ ನಡೆಯಲ್ಲ: ಸಿದ್ದು

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜಾದೂ ನಡೆಯಲ್ಲ. ಮೋದಿ ಎಷ್ಟು ಬಾರಿ ಬಂದರೂ ಬಿಜೆಪಿ ಗೆಲ್ಲಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.ನಗರದ ಬಾಪೂಜಿ ಕಾಲೇಜಿನ ಎಂಬಿಎ ಗ್ರೌಂಡ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಅಮಿತ್ ಶಾ ಬಂದಾಕ್ಷಣ ಬಿಜೆಪಿ ಗೆಲ್ಲುತ್ತೆ ಅಂತಾ ಹೇಳಲು ಆಗುತ್ತಾ.
ಅಮಿತ್ ಶಾ ಜಾದೂ ಮಾಡುತ್ತಾರಾ? ಅವರ ತಂತ್ರ ಕೆಲಸ ಮಾಡಲ್ಲ ಎಂದರು. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇಲ್ಲ. ಕರ್ನಾಟಕದಲ್ಲಿ ಅಮಿತ್ ಶಾ ಹಾಗೂ ಮೋದಿ ಜಾದೂ ನಡೆಯಲು ಸಾಧ್ಯವಿಲ್ಲ. ಬಿಜೆಪಿಯವರ ಕಳ್ಳಾಟ ಗೊತ್ತಾಗಿದೆ ಎಂದರು.ಕಳಸಾ ಬಂಡೂರಿ ನಾಲಾ ವಿವಾದ ಸಂಬಂಧ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಚುನಾವಣಾ ಗಿಮಿಕ್.
ಇವೆಲ್ಲಾ ನಡೆಯಲ್ಲ. ಎರಡು ವರ್ಷವಾಯ್ತು ಗೆಜೆಟ್ ನೊಟಿಫಿಕೇಶನ್ ಆಗಿ. ಎರಡು ವರ್ಷ ಏನು ಮಾಡುತ್ತಿದ್ದರು. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದರೂ ಯಾಕೆ ಮಾಡಲಿಲ್ಲ. ಈಗ ಚುನಾವಣೆ ಬರುತ್ತಿದೆ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡ್ತೇವೆ ಅಂತಾ ನಿರ್ಧಾರ ತೆಗೆದುಕೊಂಡಿದ್ದಾರೆ.
ಸಮಾವೇಶ ಮಾಡಿ ಜನರಿಗೆ ಸತ್ಯಾಂಶ ತಿಳಿಸುತ್ತೇವೆ ಎಂದರು.ಪಂಚಮಸಾಲಿ, ಲಿಂಗಾಯತ, ಒಕ್ಕಲಿಗರಿಗೆ ಸರ್ಕಾರ ಮೀಸಲಾತಿ ಘೋಷಿಸಿದೆ. ಸಂವಿಧಾನ ಬದ್ಧವಾಗಿ ಆಗಬೇಕು. ಒಕ್ಕಲಿಗರೇನೂ ಮೀಸಲಾತಿ ಕೇಳಿದ್ದರಾ? ಒಕ್ಕಲಿಗರಿಗೆ ಮೀಸಲಾತಿ ಕೊಟ್ಟಿದ್ದಕ್ಕೆ ನನ್ನ ವಿರೋಧ ಇಲ್ಲ. ಜಾರಿಯಾಗಬೇಕಷ್ಟೇ.
ಇದೆಲ್ಲಾ ಚುನಾವಣಾ ಗಿಮಿಕ್ ಎಂದರು.ಮುಂದಿನ ಸಿಎಂ ಸಿದ್ದು ಘೋಷಣೆಬಾಪೂಜಿ ಕಾಲೇಜಿನ ಎಂಬಿಎ ಗ್ರೌಂಡ್ ಗೆ ಸಿದ್ದರಾಮಯ್ಯ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ಇಳಿಯುತ್ತಿದ್ದಂತೆ ಕಾಂಗ್ರೆಸ್ ನ ಕೆಲವರು ಮುಂದಿನ ಸಿಎಂ ಸಿದ್ದರಾಮಯ್ಯ, ಚಾಮುಂಡೇಶ್ವರಿ ತಾಯಿ ಸುಪುತ್ರ ಸಿದ್ದರಾಮಯ್ಯ, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಘೋಷಣೆಗಳು ಮೊಳಗಿದವು.
ಕಾಂಗ್ರೆಸ್ ಹೈಕಮಾಂಡ್ ಸಿಎಂ ಎಂದು ಯಾರ ಹೆಸರೂ ಕೂಗಬಾರದು ಎಂದು ಹೇಳಿದ್ದರೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಘೋಷಣೆ ಕೂಗಿದರು.