Uncategorized

ರಾಜ್ಯದಲ್ಲಿ ಕೊರೋನಾ ಹೆಚ್ಚಾದರೆ ಅದಕ್ಕೆ ಕಾಂಗ್ರೆಸ್ ನೇರ ಕಾರಣ : ಸಚಿವ ಸುಧಾಕರ್

ಕೋವಿಡ್ ನಿಯಮ ಉಲ್ಲಂಘಿಸಿ ಜನರನ್ನು ಗುಂಪು ಗೂಡಿಸಿಕೊಂಡು ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ದೂರು ದಾಖಲಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಕಡೆ ನಿಧಾನವಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಇಂತಹ ಸಂದರ್ಭದಲ್ಲೇ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಪ್ರತಿಭಟನೆ ನಡೆಸುವ ಔಚಿತ್ಯವಾದರೂ ಏನು ಎಂದು ಅವರು ಪ್ರಶ್ನಿಸಿದರು. ಒಂದು ವೇಳೆ ಕೋವಿಡ್ ಸಂಖ್ಯೆ ಹೆಚ್ಚಳವಾದರೆ ಅದಕ್ಕೆ ನೇರವಾಗಿ ಕಾಂಗ್ರೆಸ್ ಕಾರಣವಾಗುತ್ತದೆ.

ಇದರ ನೈತಿಕತೆಯನ್ನು ಅವರೇ ಹೊರಬೇಕು. ಪ್ರತಿಭಟನೆ ಮಾಡುವುದಿದ್ದರೆ ಸ್ವತಂತ್ರ ಉದ್ಯಾನವನದಲ್ಲಿ ಮಾಡಲಿ. ಅದನ್ನು ಬಿಟ್ಟು ಜನರನ್ನು ಗುಂಪುಗೂಡಿಸಿಕೊಂಡು ರಸ್ತೆಯಲ್ಲಿ ಪ್ರತಿಭಟನೆ ಮಾಡುವುದು ಶೋಭೆ ತರುವುದಿಲ್ಲ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚಿಸಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವ ಕಾಂಗ್ರೆಸ್ ನಾಯಕರ ವಿರುದ್ಧ ದೂರು ದಾಖಲಿಸಲಾಗುವುದು.

ಈ ಹಿಂದೆಯೂ ಮೇಕೆದಾಟು ಯೋಜನೆ ವಿಷಯದಲ್ಲೂ ಇದೇ ರೀತಿ ಕಾನೂನು ಉಲ್ಲಂಘನೆ ಮಾಡಿದ್ದರು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು.

ಇದು ಯಾರಿಗೂ ಕೂಡ ಶೋಭೆ ತರುವ ಕೆಲಸವಲ್ಲ. ಒಂದು ಕಡೆ ಸಂವಿಧಾನದ ಬಗ್ಗೆ ಸಾಕಷ್ಟು ಭಾಷಣ ಮಾಡುತ್ತಾರೆ, ಮತ್ತೊಂದು ಕಡೆ ಅದೇ ಸಂವಿಧಾನಕ್ಕೆ ಅಗೌರವ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಸುಧಾಕರ್ ವಾಗ್ದಾಳಿ ನಡೆಸಿದರು.

ಈ ಹಿಂದೆ ಮಾಜಿ ಪ್ರಧಾನಿ ದಿ.ಪಿ.ವಿ.ನರಸಿಂಹರಾವ್, ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿ ವಿರುದ್ಧವೂ ವಿಚಾರಣೆ ನಡೆದಿತ್ತು.

ಅಷ್ಟೇ ಏಕೆ ನಮ್ಮವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೂಡ ವಿಚಾರಣೆ ನಡೆಸಲಾಗಿತ್ತು.

ಅಂದು ಚಕಾರ ಎತ್ತದವರು ಇಂದು ರಾಹುಲ್‍ಗಾಂಧಿಗೋಸ್ಕರ ಬೀದಿಯಲ್ಲಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ಕಾಂಗ್ರೆಸ್ ನಾಯಕರ ನಡೆ ಒಪ್ಪುವಂಥದ್ದಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸಲು ಪ್ರತಿಯೊಬ್ಬರಿಗೂ ಅವಕಾಶವಿದೆ.

ಆದರೆ, ಸಾರ್ವಜನಿಕರಿಗೆ ತೊಂದರೆ ಕೊಟ್ಟು ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ತಪ್ಪು ಮಾಡಿಲ್ಲ ಎಂದರೆ ಯಾರೊಬ್ಬರೂ ಹೆದರಬೇಕಾದ ಅಗತ್ಯವಿಲ್ಲ.

ಆದರೆ, ವಿಚಾರಣೆಯನ್ನೇ ನಡೆಸಬಾರದು ಎಂದರೆ ಇದೇನು ಸರ್ವಾಕಾರ ಧೋರಣೆಯೇ ಎಂದು ಸುಧಾಕರ್ ತರಾಟೆಗೆ ತೆಗೆದುಕೊಂಡರು.

ಶಾಲೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರ ಕುರಿತಂತೆ ಪ್ರತಿಕ್ರಿಯಿಸಿದ ಸುಧಾಕರ್ ಅವರು, ಒಂದೆರಡು ಶಾಲೆಗಳಲ್ಲಿ ಈ ರೀತಿ ಕಾಣಿಸಿಕೊಂಡಿದೆ.

ಆ ಶಾಲೆಗಳಿಗೆ ರಜೆ ಕೊಡಲಾಗಿದೆ ಎಂದು ಹೇಳಿದರು. ಈಗಾಗಲೇ ನಾವು ಶಾಲೆಗಳಿಗೆ ಸ್ಪಷ್ಟವಾದ ನಿಯಮಗಳನ್ನು ರೂಪಿಸಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದೇವೆ. ಪ್ರತಿಯೊಂದು ಶಾಲೆಗಳೂ ಕಡ್ಡಾಯವಾಗಿ ಇದನ್ನು ಪಾಲಿಸಲೇಬೇಕು.

ವಿದ್ಯಾರ್ಥಿಗಳು ಬರುವಾಗ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಹಾಕುವುದು ಸೇರಿದಂತೆ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕೆಂದು ಮನವಿ ಮಾಡಿದರು.ಅಕ್ಟೋಬರ್‍ನಲ್ಲಿ ಕೊರೊನಾ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ ಎಂಬ ಕಾನ್ಪುರದ ಐಐಟಿ ವರದಿ ಬಂದಿದೆ.

ಜೂನ್ ಮೂರನೆ ವಾರದಿಂದ ಅಕ್ಟೋಬರ್‍ವರೆಗೂ ಕಾಣಿಸಿಕೊಳ್ಳಬಹುದು ಎಂದು ವರದಿ ನೀಡಿದ್ದಾರೆ. ನಾವು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅದಕ್ಕೆ ತಕ್ಕಂತೆ ಪೂರಕವಾಗಿ ಸಿದ್ಧತೆ ಮಾಡಿಕೊಂಡಿದ್ದೇವೆ.

ಈಗ ಬರುತ್ತಿರುವ ಕೋವಿಡ್ ಪ್ರಬೇಧ ಸೌಮ್ಯ ಲಕ್ಷಣವಿರುವುದರಿಂದ ಜನಸಾಮಾನ್ಯರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸುಧಾಕರ್ ಅಭಯ ನೀಡಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button