
ಕಳೆದ ಮೂರು ದಿನಗಳಿಂದ ರಾಜ್ಯದ ಒಳನಾಡಿನಲ್ಲಿ ಚದುರಿದಂತೆ ಅಕಾಲಿಕ ಮಳೆ ಮುಂದುವರೆದಿದ್ದು, ಇನ್ನು ಮೂರು ದಿನಗಳ ಕಾಲ ಮಳೆಯಾಗಲಿದೆ.ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಕೆಲವೆಡೆ ಸಾಧಾರಣ ಮಳೆಯಾಗಿದ್ದರೆ, ಮತ್ತೆ ಕೆಲವೆಡೆ ಗುಡುಗು, ಮಿಂಚು, ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ.
ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ರಾಮನಗರ, ಕೊಡಗು, ತುಮಕೂರು, ಉಡುಪಿ, ಚಿತ್ರದುರ್ಗ, ವಿಜಯನಗರ, ಬಾಗಲಕೋಟೆ, ಬೀದರ್ ಜಿಲ್ಲೆಗಳಲ್ಲಿ ಭಾಗಶಃ ಚದುರಿದಂತೆ ಮಳೆಯಾಗಿದೆ.ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ ಅಷ್ಟಾಗಿ ಮಳೆಯಾಗಿಲ್ಲ. ಕರಾವಳಿ ಭಾಗದಲ್ಲೂ ಮಳೆ ಕಡಿಮೆಯಾಗಿದೆ.
ಪೂರ್ವ ಮುಂಗಾರು ಮಳೆ ಮೇ ತಿಂಗಳಿನಲ್ಲಿ ಬರುವುದು ವಾಡಿಕೆ. ಅದರಂತೆ ಈ ತಿಂಗಳ ಮೊದಲ ವಾರದಲ್ಲೇ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.
ಭಾನುವಾರದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಆದರೆ, ಕರಾವಳಿ ಭಾಗದಲ್ಲಿ ಇದುವರೆಗೂ ಅಷ್ಟಾಗಿ ಉತ್ತಮ ಮಳೆಯಾಗಿಲ್ಲ. ಬೆಂಗಳೂರು ಸೇರಿದಂತೆ ಉತ್ತಮುತ್ತಲ ಆರೇಳು ಜಿಲ್ಲೆಗಳಲ್ಲಿ ಪದೇ ಪದೇ ಮಳೆಯಾಗುತ್ತಿದೆ.ಪೂರ್ವ ಮುಂಗಾರು ಮಳೆಯಿಂದ ಬೇಸಿಗೆ ಹಂಗಾಮಿನಲ್ಲಿ ಬೆಳೆದ ವಿವಿಧ ಬೆಳೆಗಳಿಗೆ ಹಾನಿಯೂ ಹಾಗಿದೆ. ಅಲ್ಲದೆ, ತೋಟಗಾರಿಕೆ ಬೆಳೆಗಳು ಕೂಡ ಆಲಿಕಲ್ಲು, ಬಿರುಗಾಳಿ ಸಹಿತ ಮಳೆಗೆ ಹಾನಿಗೀಡಾಗಿವೆ ಎಂದರು.
ರಾಜ್ಯದಲ್ಲಿ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆಯಲ್ಲಿ ರೈತರು ತೊಡಗಿದ್ದಾರೆ. ಬೇಸಿಗೆ ಹಂಗಾಮಿನ ವಿವಿಧ ಬೆಳೆಗಳನ್ನು ರೈತರು ಬಿತ್ತನೆ ಮಾಡುತ್ತಿದ್ದಾರೆ.ಬೇಸಿಗೆ ಬಿಸಿಲಿಗೆ ತಾಪಮಾನ ನಿರಂತರ ಏರಿಕೆಯಾಗಿ ಸ್ಥಳೀಯವಾಗಿ ವಾಯುಭಾರ ಕುಸಿತ ಉಂಟಾಗುವುದರಿಂದ ಬಿರುಗಾಳಿ ಹಾಗೂ ಗುಡುಗು, ಮಿಂಚು, ಸಿಡಿಲಿನಿಂದ ಕೂಡಿದ ಮಳೆಯಾಗುವುದು ಸಹಜ ಪ್ರಕ್ರಿಯೆ ಎಂದರು.ಒಟ್ಟಾರೆ ಇನ್ನೂ ನಾಲ್ಕೈದು ದಿನಗಳ ಕಾಲ ರಾಜ್ಯದಲ್ಲಿ ಮಳೆ ಮುಂದುವರೆಯುವ ಲಕ್ಷಣಗಳು ಗೋಚರಿಸುತ್ತಿವೆ. ಕೆಲವೆಡೆ ಸಾಧಾರಣ ಮಳೆಯಾದರೆ, ಇನ್ನು ಕೆಲವೆಡೆ ಗುಡುಗು-ಮಿಂಚಿನಿಂದ ಕೂಡಿದ ಮಳೆಯಾಗಲಿದೆ ಎಂದು ವಿ.ಎಸ್.ಪ್ರಕಾಶ್ ಹೇಳಿದರು.