ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಬಿಡುಗಡೆಗೆ ಸುಪ್ರೀಂ ಆದೇಶ
after 31 years,Jail,killer,Perarivalan,Rajiv Gandhi,releases,Supreme Court

ಸುಪ್ರೀಂ ಕೋರ್ಟ್ ಆದೇಶಿಸಿದ ಪ್ರಕಾರ 31 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಎ.ಜಿ.ಪೆರಾರಿವಾಲನ್ ಶಿಕ್ಷೆಯಿಂದ ಮುಕ್ತರಾಗಿದ್ದಾರೆ. ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ್‍ರಾವ್, ಬಿ.ಆರ್.ಗಾರ್ವಿ ಅವರನ್ನೊಳಗೊಂಡ ವಿಭಾಗೀಯ ಪೀಠ ಮಾರ್ಚ್ 9 ರಂದು ಪೆರಾರಿವಾಲನ್ ಅವರಿಗೆ ಜಾಮೀನು ನೀಡಿತು. 30 ವರ್ಷಗಳಿಗೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ್ದಾರೆ ಮತ್ತು ಪೆರೋಲ್‍ನಲ್ಲಿ ಹೊರಬಂದಾಗ ಕಾನೂನು ಬಾಹಿತವಾಗಿ ಯಾವ ಚಟುವಟಿಕೆಯಲ್ಲೂ ಭಾಗಿಯಾಗಿಲ್ಲ ಎಂಬುದನ್ನು ಸುಪ್ರೀಂಕೋರ್ಟ್ ಗಮನಿಸಿತ್ತು.
ತಮಿಳುನಾಡು ಸರ್ಕಾರದ ಶಿಫಾರಸ್ಸಿನ ಮೇರೆಗೆ ಅಪರಾಧಿಯನ್ನು ಶಿಕ್ಷೆಯಿಂದ ಬಿಡುಗಡೆ ಮಾಡಿದೆ. ಈಗಾಗಲೇ ಜಾಮೀನಿನ ಮೇಲೆ ಹೊರಗೆ ಇರುವ ಅಪರಾಧಿ ಇದರಿಂದ ನಿಟ್ಟುಸಿರು ಬಿಡುವಂತಾಗಿದೆ.
1991ರ ಮೇ 21ರಂದುತಮಿಳುನಾಡಿನ ಶ್ರೀಪೆರಂಬೂರಿನಲ್ಲಿ ಎಲ್‍ಟಿಟಿಇ ಪ್ರೇರಿತ ಮಹಿಳೆ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದಾಗ ರಾಜೀವ್ ಗಾಂಧಿ ಸೇರಿ ಹಲವರು ಮೃತಪಟ್ಟಿದ್ದರು. ಆ ಕೃತ್ಯಕ್ಕೆ ಬಳಸಿದ್ದ 2 ವೋಲ್ಟ್ ಬ್ಯಾಟರಿಯನ್ನು ಪೆರಾರಿವಾಲನ್‍ರಿಂದ ಖರೀದಿಸಲಾಗಿತ್ತು ಎಂದು ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಆರೋಪಿಸಿತ್ತು. ಆದರೆ ಈ ಪ್ರಕರಣದಲ್ಲಿ ತಾನು ಅಮಾಯಕ. ಖರೀದಿಸಲಾದ ಬ್ಯಾಟರಿಯನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬ ಮಾಹಿತಿ ತಮಗೆ ಇರಲಿಲ್ಲ ಎಂದು ಬಂಧಿತ ವಾದಿಸಿದ್ದರು. ಆತನ ತಾಯಿ ಕಂಡ ಕಂಡವರ ಬಳಿಯೆಲ್ಲಾ ತಮ್ಮ ಮಗನ ಬಿಡುಗಡೆಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು.
ಈ ಮೊದಲು ತಮಿಳುನಾಡು ಸಂಪುಟ ಎ.ಜಿ.ಪೆರಾರಿವಾಲನ್ ಬಿಡುಗಡೆಗೆ ನಿರ್ಧಾರ ತೆಗೆದುಕೊಂಡಿತ್ತು. ರಾಜ್ಯಪಾಲರು ಅದಕ್ಕೆ ಬದ್ಧತೆ ತೋರಿಸಿದ್ದರು. ಈ ನಿರ್ಧಾರದ ಬಗ್ಗೆ ಮೊದಲು ಆಕ್ಷೇಪ ವ್ಯಕ್ತ ಪಡಿಸಿದ್ದ ಸುಪ್ರಿಂಕೋರ್ಟ್ ಅನುಕಂಪ ಪಡೆಯುವ ಅಪರಾಧಿಯ ಅರ್ಜಿಯನ್ನು ರಾಷ್ಟ್ರಪತಿ ಅವರ ಅವಗಾಹನೆಗೆ ಕಳುಹಿಸಿತ್ತು. ಸಂವಿಧಾನದ ವಿರುದ್ಧದ ಕೆಲಸಗಳನ್ನು ಮುಚ್ಚಿದ ಕಣ್ಣುಗಳಲ್ಲಿ ನೋಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
ಕೇಂದ್ರ ಸರ್ಕಾರ ರಾಷ್ಟ್ರಪತಿ ಅವರ ನಿರ್ಧಾರ ಹೊರ ಬೀಳುವವರೆಗೂ ಕಾಯುವಂತೆ ನೀಡಿದ್ದ ಸಲಹೆಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್ ಪೆರರಿವಲನ್ ಬಿಡುಗಡೆಗೆ ಆದೇಶಿಸಿದೆ. ಸಂವಿಧಾನದ ಪರಿಚ್ಛೇಧ 161ರ ಅನುಸಾರ ತಮಿಳುನಾಡು ಸರ್ಕಾರಕ್ಕೆ ಸಲಹೆ ನೀಡಲು ಮತ್ತು ಸಹಾಯ ಮಾಡಲು ಅಲ್ಲಿನ ರಾಜ್ಯಪಾಲರಿಗೆ ಅಧಿಕಾರ ಇದೆ. ಈ ವಿಷಯವಾಗಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ತಿಳಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಎ.ಜಿ.ಪೆರಾರಿವಾಲನ್ ಅವರನ್ನು ಬಿಡುಗಡೆಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಅವರ ಕುಟುಂಬ, ಸಂಬಂಧಿಕರು ಮತ್ತು ತಮಿಳುನಾಡಿನ ಹಲವು ತಮಿಳು ಪರ ಸಂಘಟನೆಗಳು ಸಂಭ್ರಮಿಸಿವೆ. ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಸಂಬಂಧಿರು ಜೇಲಾರ್‍ಪೇಟೆಯ ಅವರ ನಿವಾಸಕ್ಕೆ ಆಗಮಿಸಲು ಪ್ರಾರಂಭಿಸಿದರು. ಪೆರಾರಿವಾಲನ್ ತಾಯಿ ಅರ್ಪುತಮ್ಮಾಳ್ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಪೆರಾರಿವಾಲನ್ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದ ಅವರ ಸಹೋದರಿ ಮತ್ತು ಅವರ ಕುಟುಂಬ ಭಾವೋದ್ವೇಗಕ್ಕೆ ಒಳಗಾಗಿದೆ. ಅತೀವ ಸಂತಸದೊಂದಿಗೆ ತಬ್ಬಿ ಸಂತಸ ವ್ಯಕ್ತಪಡಿಸಿದೆ.
ಪೆರವಿಯಾಲನ್ ಅವರ ತಂದೆ ಕುಯಿಲ್ದಾಸನ್ ಅವರು ತಮ್ಮ ಮಗನ 30 ವರ್ಷಗಳ ಸೆರೆವಾಸವು ಅಂತ್ಯಗೊಳ್ಳುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ ಎಂದಿದ್ದಾರೆ. ಮದುವೆ ಸೇರಿದಂತೆ ಮಗನ ಭವಿಷ್ಯದ ಯೋಜನೆಗಳ ಬಗ್ಗೆ ಸುದ್ದಿಗಾರರು ಕೇಳಿದಾಗ, ಅಂತಹ ವಿಷಯಗಳನ್ನು ಕುಟುಂಬದವರು ಚರ್ಚಿಸುತ್ತಾರೆ ಎಂದು ಕುಯಿಲ್ದಾಸನ್ ಹೇಳಿದ್ದಾರೆ.ತಮಿಳು ಪರ ಸಂಘಟನೆಗಳ ಕಾರ್ಯಕರ್ತರು ರಾಜ್ಯದ ಹಲವೆಡೆ ಬೀದಿಗಿಳಿದು ಸುಪ್ರೀಂ ತೀರ್ಪಿಗೆ ಜೈಕಾರ ಕೂಗಿದರು. 2018 ರ ಸಂಪುಟ ಸಭೆಯ ಶಿಫಾರಸಿನ ಮೇರೆಗೆ ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಲಾಯಿತು. ಪ್ರಸ್ತುತ ಜಾಮೀನು ಪಡೆದಿರುವ ಪೆರಾರಿವಾಲನ್‍ರಿಗೆ ರಾಜ್ಯ ಸರ್ಕಾರವು ಈ ಹಿಂದೆ ಹಲವು ಸಂದರ್ಭಗಳಲ್ಲಿ ಪೆರೋಲ್ ನೀಡಿತ್ತು.
ಪ್ರಕರಣದಲ್ಲಿ ಮುರುಗನ್, ಸಂತನ್, ಜಯಕುಮಾರ್, ರಾಬರ್ಟ್ ಪಯಸ್, ಜಯಚಂದ್ರನ್ ಮತ್ತು ನಳಿನಿ ಸೇರಿ ಇತರರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.ಎಂಡಿಎಂಕೆ ಸಂಸ್ಥಾಪಕ ವೈಕೊ ಮತ್ತು ಪಿಎಂಕೆ ನಾಯಕ ಎಸ್ ರಾಮದಾಸ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಪೆರಾರಿವಾಲನ್ ಬಿಡುಗಡೆಯನ್ನು ಸ್ವಾಗತಿಸಿದ್ದಾರೆ. ಜೈಲಿನಲ್ಲಿದ್ದ ಪೆರಾರಿವಾಲನ್ ಬಿಸಿಎ, ಎಂಸಿಎ ಹಾಗೂ ಇತರೆ ಐದು ಕೋರ್ಸ್‍ಗಳಲ್ಲಿ ಪದವಿ ಪಡೆದಿದ್ದಾರೆ.