ರಾಜಾಧಿರಾಜ ಗೋವಿಂದ ದೇವಾಲಯ ಪವಿತ್ರ ಯಾತ್ರಾಸ್ಥಳವಾಗಲಿದೆ : ರಾಷ್ಟ್ರಪತಿ

ರಾಜಾಧಿರಾಜ ಗೋವಿಂದ ದೇವಾಲಯವು ಆಧುನಿಕ ಪವಿತ್ರ ಯಾತ್ರಾಸ್ಥಳವಾಗಿ ಹೊರಹೊಮ್ಮಲಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ತಿಳಿಸಿದರು.
ಕನಕಪುರ ರಸ್ತೆಯ ವಸಂತಪುರದಲ್ಲಿ ಇಸ್ಕಾನ್ ಸಂಸ್ಥೆ ವತಿಯಿಂದ ಹೊಸದಾಗಿ ನಿರ್ಮಿಸಿರುವ ಶ್ರೀ ರಾಜಾರಾಜ ಗೋವಿಂದ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಿರುಮಲ ತಿರುಪತಿಯ ದೇವಾಲಯದ ವೈಶಿಷ್ಟ್ಯವನ್ನೇ ಈ ದೇವಾಲಯವು ಹೋಲುತ್ತದೆ.
ಗೋವಿಂದಮೂರ್ತಿಯು ಬಾಲಾಜಿಯ ಪ್ರತಿರೂಪದಂತೆ ಭಾಸವಾಗುತ್ತದೆ. ಹೀಗಾಗಿ ಅಪಾರ ಸಂಖ್ಯೆಯ ಭಕ್ತರನ್ನು ಈ ದೇವಾಲಯ ಆಕರ್ಷಿಸಲಿದೆ.
ಸುಂದರವಾದ ಸ್ಥಳದಲ್ಲಿ ದೇವಾಲಯ ನಿರ್ಮಾಣವಾಗಿದ್ದು, 5 ಸಾವಿರ ಭಕ್ತರು ಸರದಿ ಸಾಲಿನಲ್ಲಿ ಕಾಯ್ದು ದೇವರ ದರ್ಶನ ಮಾಡಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ ಎಂದರು.
ದೇವಾಲಯದಲ್ಲಿ ನಿತ್ಯವೂ ಭಕ್ತರಿಗೆ ಉಚಿತ ಪ್ರಸಾದ ನೀಡುವ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.ಇಸ್ಕಾನ್ ಸಂಸ್ಥೆಯು ಅಕ್ಷಯ ಪಾತ್ರ ಫೌಂಡೇಷನ್ ಮೂಲಕ ಮಧ್ಯಾಹ್ನದ ಬಿಸಿಯೂಟವನ್ನು ನೀಡುತ್ತಿದೆ.
ದೇಶದಲ್ಲಿ ಅತಿ ದೊಡ್ಡ ಎನ್‍ಜಿಒ ಸಂಸ್ಥೆ ಇದಾಗಿದೆ. ಅಕ್ಷಯ ಪಾತ್ರ ಮತ್ತು ಅದರ ಪೋಷಕ ಸಂಸ್ಥೆಗಳ ಮೂಲಕ 25 ಕೋಟಿಗೂ ಹೆಚ್ಚು ಜನರಿಗೆ ಊಟವನ್ನು ನೀಡುತ್ತಿರುವುದು ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.ಹಲವು ದೇವಾಲಯಗಳಂತೆ ಈ ದೇವಾಲಯವೂ ಎತ್ತರದ ಸ್ಥಾನದಲ್ಲಿದೆ.
ದೇವಾಲಯಗಳು ಹಿಂದೂಧರ್ಮದ ಪ್ರಮುಖ ಸಂಕೇತಗಳಾಗಿವೆ ಎಂದು ಹೇಳಿದರು. ದೇವಾಲಯಗಳು ಕೇವಲ ಪೂಜಾಸ್ಥಳಗಳಷ್ಟೇ ಅಲ್ಲ.
ಕಲೆ, ವಾಸ್ತುಶಿಲ್ಪ, ಭಾಷೆ, ಜ್ಞಾನ, ಸಂಪ್ರದಾಯಗಳ ಸಂಗಮವೂ ಆಗಿವೆ.ಬೆಟ್ಟದ ತುದಿಯನ್ನು ತಲುಪಲು ಹಲವು ಮಾರ್ಗಗಳಿರುವಂತೆ ಭಗವಂತನನ್ನು ಅರಿಯಲು ಹಿಂದೂ ಧರ್ಮದಲ್ಲಿ ಜ್ಞಾನ, ಕರ್ಮ, ಭಕ್ತಿಯಂತಹ ಅನೇಕ ಮಾರ್ಗಗಳಿವೆ.
ಮಹಾನ್ ಆಧ್ಯಾತ್ಮಿಕ ನಾಯಕರಾದ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯರು ಆಧ್ಯಾತ್ಮದ ಮಾರ್ಗಗಳನ್ನು ತೋರಿಸಿದ್ದಾರೆ. ಭಗವದ್ಗೀತೆ ಹಿಂದೂಗಳ ಅತ್ಯಂತ ಪವಿತ್ರ ಗ್ರಂಥವಾಗಿದೆ.
ಇದು ವಿಶ್ವದ 70ಕ್ಕೂ ಅಧಿಕ ಭಾಷೆಗಳಿಗೆ ಭಾಷಾಂತರವಾಗಿದೆ ಎಂದರು.ಮಹಾತ್ಮ ಗಾಂೀಧಿಜಿ ಅವರು ಕೂಡ ಆಧ್ಯಾತ್ಮಿಕತೆಯಿಂದ ಪ್ರಭಾವಿತರಾಗಿದ್ದರು.
ಅಲ್ಲದೆ, ದೈನಂದಿನ ಬದುಕಿನಲ್ಲಿ ಆಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳ ಧರ್ಮಪತ್ನಿ ಸವಿತಾ ಕೋವಿಂದ್, ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಎಂ.ಕೃಷ್ಣಪ್ಪ, ಬೆಂಗಳೂರಿನ ಇಸ್ಕಾನ್ ಸಂಸ್ಥೆ ಅಧ್ಯಕ್ಷ ಮಧು ಪಂಡಿತ್‍ದಾಸ್ ಮತ್ತಿತರರು ಪಾಲ್ಗೊಂಡಿದ್ದರು.