ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಪುನಾರಾರಂಭದ ಚಿಂತನೆ : ನೂತನ ಕಮಿಷನರ್ ಪ್ರತಾಪ್‍ರೆಡ್ಡಿ

ರಾಜಧಾನಿ : ಬೆಂಗಳೂರು ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಿರುವ ವಾಹನಗಳ ತೆರವು ಕಾರ್ಯಾಚರಣೆಯ ಭಾಗವಾದ ಟೋಯಿಂಗ್‍ಅನ್ನು ಸರಕಾರದ ಜತೆ ಚರ್ಚಿಸಿ ಮತ್ತೆ ಶುರು ಮಾಡುವ ಚಿಂತನೆ ಇದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್‍ರೆಡ್ಡಿ ತಿಳಿಸಿದರು
ಇಂದು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಿರ್ಗಮಿತ ಆಯುಕ್ತ ಕಮಲ್ ಪಂತ್ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಚಾರದಟ್ಟಣೆ ನಿಯಂತ್ರಿಸಲು ಈಗಾಗಲೇ ಸಾಕಷ್ಟು ಪ್ರಯತ್ನಗಳು ನಡೆದಿವೆ ಎಂದರು.
ಅನಧಿಕೃತವಾಗಿ ನಡೆಯುವ ಕ್ಲಬ್‍ಗಳು ಹಾಗೂ ಇತರ ಚಟುವಟಿಕೆಗಳ ವಿರುದ್ಧ ಮುಲಾಜಿಲ್ಲದೆ ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಪ್ರತಿ ಪೊಲೀಸ್ ಠಾಣೆಯಲ್ಲೂ ಜನಸ್ನೇಹಿ ವ್ಯವಸ್ಥೆ ಜಾರಿಯಾಗಬೇಕು. ಅದಕ್ಕಾಗಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸ್ಪಷ್ಟ ಸೂಚನೆ ನೀಡುವುದಾಗಿ ಹೇಳಿದ ಅವರು, ಜಾಗತಿಕ ಮನ್ನಣೆ ಪಡೆದ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಪಾಲನೆ ತಮ್ಮ ಮೊದಲ ಆದ್ಯತೆಯಾಗಿದ್ದು, ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಿ ಅಪರಾಧ ನಿಯಂತ್ರಣಕ್ಕೆ ಒತ್ತು ನೀಡಲಾಗುವುದು.
ಬೆಂಗಳೂರಿನಲ್ಲಿರುವ ೮ ವಿಭಾಗಗಳ ಮಟ್ಟದಲ್ಲೂ ಪ್ರಮುಖ ಅಪರಾಧ ನಿಗಾವಣೆ ಘಟಕಗಳನ್ನು ಸ್ಥಾಪಿಸಲಾಗುವುದು. ಅಪರಾಧಗಳ ತನಿಖೆ, ದೋಷಾರೋಪಣ ಪಟ್ಟಿ ಸಲ್ಲಿಕೆ, ಸಾಕ್ಷ್ಯಸಂಗ್ರಹ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಈ ಘಟಕ ಜವಾಬ್ದಾರಿ ನಿರ್ವಹಿಸಲಿದೆ. ಹಿರಿಯ ಅಧಿಕಾರಿಗಳು ಹಾಗೂ ತಜ್ಞರು ಘಟಕದಲ್ಲಿ ಕೆಲಸ ಮಾಡುತ್ತಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶ ಇಲ್ಲ ಎಂದರು.