
ಬೆಂಗಳೂರು: ರಾಷ್ಟ್ರದ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸಿರುವುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖಂಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕಾಯತ್ ಈ ಹಿಂದೆ ಮಾಡಿದ ಹೋರಾಟಕ್ಕೆ ನಾವು ಸಪೋರ್ಟ್ ಕೊಟ್ಟಿದ್ದೆವು. ಬಿಜೆಪಿ ಸರ್ಕಾರ ತಂದ ಮೂರು ಕಾನೂನು ವಾಪಸು ಪಡೆಯಲು ಹೋರಾಟ ಮಾಡಿದ್ರು. ಅದರಲ್ಲಿ ಸಕ್ಸಸ್ ಸಹ ಆದ್ರು. ಅವರು ಇಲ್ಲಿ ಬಂದು ಸುದ್ದಿಗೋಷ್ಠಿ ಮಾಡ್ತಿರುವಾಗ ಹಲ್ಲೆ ನಡೆದಿದೆ ಎಂದು ಡಿಕೆಶಿ ವಿವರಿಸಿದರು.

ರಾಜ್ಯಕ್ಕೆ ಬಂದಾಗ ಅವರ ರಕ್ಷಣೆ ನಮ್ಮ ಸರ್ಕಾರದ ಕೆಲಸ. ಸರ್ಕಾರ ಇದರಲ್ಲಿ ವಿಫಲವಾಗಿದೆ. ಇದು ರಾಜ್ಯಕ್ಕೆ ಅವಮಾನವಾಗಿದೆ. ರಾಷ್ಟ್ರ ಮಟ್ಟದ ರೈತರಿಗೆ ಮಾಡಿದ ಅಪಮಾನವಾಗಿದೆ. ಯಾರು ಆದರೂ ಡೀಲ್ ಮಾಡಿಕೊಳ್ಳಲಿ. ನನಗೆ ಗೊತ್ತಿಲ್ಲ. ನಮಗೆ ವೈಯಕ್ತಿಕ ಹಿತಕ್ಕಿಂತಲೂ ರಾಜ್ಯದ ಹಿತ ಮುಖ್ಯ. ರಾಜ್ಯದಲ್ಲೂ ಆ ಮೂರು ಕಾಯಿದೆ ವಾಪಸು ಪಡೆಯಬೇಕು ಎಂದು ಆಗ್ರಹಿಸಿದರು.

ಏನಿದು ಘಟನೆ..?
ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಗಾಂಧಿ ಭವನದಲ್ಲಿ ಇಂದು ಸಭೆ ಕರೆಯಲಾಗಿತ್ತು. ರಾಷ್ಟ್ರೀಯ ಕಿಸಾನ್ ಮೊರ್ಚಾ ಅಧ್ಯಕ್ಷ ರಾಕೇಶ್ ಸಿಂಗ್ ಟಿಕಾಯತ್, ಯುದ್ದವೀರ ಸಿಂಗ್, ಪ್ರೊಫೆಸರ್ ರವಿ ವರ್ಮಕುಮಾರ್, ಚುಕ್ಕಿ ನಂಜುಂಡಸ್ವಾಮಿ ಅವರು ವೇದಿಕೆಯಲ್ಲಿದ್ದರು. ಈ ವೇಳೆ ಏಕಾಏಕಿ ನುಗ್ಗಿದ ರಾಷ್ಟ್ರ ರಕ್ಷಣಾ ಪಡೆಯ ಭರತ್ ಶೆಟ್ಟಿ, ಟಿಕಾಯತ್ ಮುಖಕ್ಕೆ ಮಸಿ ಬಳಿದು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾನೆ. ಮಸಿ ಬಳಿಯುವ ಮುನ್ನ ಬೇರೊಬ್ಬರಿಂದ ಮೈಕ್ ನಿಂದ ಹೊಡೆದು ಟಿಕಾಯತ್ ಮೇಲೆ ಹಲ್ಲೆ ಯತ್ನಿಸಲಾಗಿದೆ. ಅದಾದ ಬಳಿಕ ಭರತ್ ಶೆಟ್ಟಿ ಮಸಿ ಎರಚಿದ್ದಾನೆ.
ಮೋದಿ ರೈತ ಪರ ಯೋಜನೆಯ ಬಗ್ಗೆ ಟಿಕಾಯಿತ್ ರೈತರಿಗೆ ದಾರಿ ತಪ್ಪಿಸಿದ್ದಾರೆ. ವೈಯಕ್ತಿಕವಾಗಿ ದುಡ್ಡು ಮಾಡಿಕೊಳ್ಳಲು ರೈತ ಹೋರಾಟಗಾರನ ವೇಷದಲ್ಲಿ ಟಿಕಾಯಿತ್ ಇದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿ ಮಸಿ ಎರಚಿದ್ದಾನೆ.