ರಸ್ತೆ ಗುಂಡಿ ಸರಣಿ ಸಾವು ಬಿಜೆಪಿ ವಿರುದ್ಧ ಎಚ್‌ಡಿಕೆ ಗರಂ

ರಸ್ತೆ ಗುಂಡಿಗಳ ಸರಣಿ ಸಾವುಗಳಿಗೆ ರಾಜ್ಯ ಬಿಜೆಪಿ ಸರ್ಕಾರವೇ ನೇರ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದು, ಮುಗ್ಧ ಜನರ ಸಾವು-ನೋವುಗಳಿಗೆ ಬಿಬಿಎಂಪಿಯೇ ಸಂಪೂರ್ಣ ಹೊಣೆ.
ಸಂಬಂಧಪಟ್ಟ ಮಂತ್ರಿಗಳು, ಅಧಿಕಾರಿಗಳೇ ಇದಕ್ಕೆ ಉತ್ತರದಾಯಿಗಳು ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಾಗಿರುವ ಬಗ್ಗೆ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಮಗಾರಿಗಳ ಪರ್ಸಂಟೇಜ್ ವ್ಯವಸ್ಥೆಯಿಂದ ಬೆಂಗಳೂರಿನ ರಸ್ತೆಗಳು ಗುಂಡಿಗಳಾಗಿ ಮಾರ್ಪಟ್ಟಿವೆ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ರಾಜ್ಯಸರ್ಕಾರಕ್ಕೆ ರಸ್ತೆ ಗುಂಡಿಗಳು ಎಂದರೆ ಬಲು ಇಷ್ಟ, ಗುಂಡಿಗಳು ಬಿದ್ದಷ್ಟು ಕಿಸೆಗೆ ಹರಿದು ಬರಲಿದೆ. ಇವರಿಗೆ ಹೈಕೋರ್ಟ್ ಛೀಮಾರಿ ಹಾಕಿದರೂ ನಾಚಿಕೆ, ಸಂಕೋಚ ಎನ್ನುವುದಿಲ್ಲ.
ಜೈಲಿಗೆ ಅಟ್ಟುವುದಾಗಿ ಎಚ್ಚರಿಕೆ ಕೊಟ್ಟರೂ ಅಧಿಕಾರಿಗಳು ಬಂಡತನ ಬಿಡುತ್ತಿಲ್ಲ ಎಂದರು.ಬೆಂಗಳೂರಿನಲ್ಲಿ ಕೊಲೆಪಾತಕ ಗುಂಡಿ ಕೂಪಗಳು ಸರಣಿ ಸಾವುಗಳಿಗೆ ಕಾರಣವಾಗಿದ್ದರೆ, ಅದೇ ಗುಂಡಿಗಳು ಕೆಲವರಿಗೆ ಕಲ್ಪವೃಕ್ಷವಾಗಿವೆ ಎಂದು ವ್ಯಂಗ್ಯವಾಡಿರುವ ಅವರು, ಜೀವ ಬಲಿಯಾದ ನಂತರ ಎಚ್ಚೆತ್ತುಕೊಳ್ಳುವ ನಾಟಕ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪಾಲಿಕೆ ಮಾಡಿದ ಪಾಪಕ್ಕೆ ನತದೃಷ್ಟ ಮಹಿಳೆ ಉಮಾದೇವಿ ಅವರು ಬಲಿಯಾಗಿದ್ದಾರೆ. ಅವರಿಗೆ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುವುದಲ್ಲ. ಇನ್ನಾದರೂ ಗುಂಡಿಗಳನ್ನು ಮುಚ್ಚಬೇಕು ಹಾಗೂ ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಉಮಾದೇವಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ, ರಾಜ್ಯಸರ್ಕಾರ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.