ರಸ್ತೆ ಗುಂಡಿ ಮುಚ್ಚುವಲ್ಲಿ BBMP ಸಂಪೂರ್ಣ ವಿಫಲ: ಹೈಕೋರ್ಟ್ ಬೇಸರ

ಬೆಂಗಳೂರು: ನಗರದಲ್ಲಿ ವಾಹನ ಸಂಚಾರಕ್ಕೆ ಕಂಟಕವಾಗಿರುವ ರಸ್ತೆ ಗುಂಡಿ ಮುಚ್ಚುವ ವಿಚಾರ ಸಂಬಂಧ ನ್ಯಾಯಾಲಯ ಕಾಲಕಾಲಕ್ಕೆ ನೀಡಿರುವ ಆದೇಶ ಪಾಲನೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP- ಬಿಬಿಎಂಪಿ) ಸಂಪೂರ್ಣ ವಿಫಲವಾಗಿದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ನಗರದ ವ್ಯಾಪ್ತಿಯಲ್ಲಿನ ರಸ್ತೆ ದುಸ್ಥಿತಿ ಸಂಬಂಧ ಕೋರಮಂಗಲದ ವಿಜಯ್ ಮೆನನ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರ್ಲೆ ಮತ್ತು ನ್ಯಾ. ಅಶೋಕ್ ಎಸ್. ಕಿಣಗಿ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು.ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲೆ ಎಸ್.ಆರ್.ಅನುರಾಧ, ‘ನಗರದಲ್ಲಿನ ರಸ್ತೆ ಗುಂಡಿಗಳಿಂದ ಸಾವನ್ನಪ್ಪುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ.
ಹೈಕೋರ್ಟ್‌ನ ಹಿಂದಿನ ಆದೇಶದಂತೆ ಪಾಲಿಕೆ ಅಧುನಿಕ ಮತ್ತು ವೈಜ್ಞಾನಿಕ ತಂತ್ರಜ್ಞಾನ ಬಳಸಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿಲ್ಲ. ಇದರಿಂದ ವಾಹನ ಸವಾರರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ದೂರಿದರು.ಬಿಬಿಎಂಪಿ ಪರ ವಕೀಲ ವಿ.ಶ್ರೀನಿ , ‘ವೈಯಕ್ತಿಕ ಕಾರಣದಿಂದಾಗಿ ವಾದ ಮಂಡಿಸಲು ಸಾಧ್ಯವಾಗುತ್ತಿಲ್ಲ.
ರಸ್ತೆ ಗುಂಡಿ ಮುಚ್ಚುವ ಸಂಬಂಧ ಎಲ್ಲ ಮಾಹಿತಿಯನ್ನು ಪಾಲಿಕೆಯಿಂದ ಸಂಗ್ರಹಿಸಲಾಗಿದ್ದು, ಆ ಕುರಿತು ಸಮಗ್ರ ವರದಿ ಸಲ್ಲಿಸಲಾಗುವುದು. ಅದಕ್ಕೆ ಸ್ವಲ್ಪ ಸಮಯ ನೀಡಬೇಕು’ ಎಂದು ಕಾಲಾವಕಾಶ ಕೋರಿದರು.ಆಗ ನ್ಯಾಯಪೀಠ, ‘ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆಗಾಗ್ಗೆ ನೀಡುತ್ತಿರುವ ಆದೇಶಗಳನ್ನು ಪಾಲಿಸುವಲ್ಲಿ ಪಾಲಿಕೆ ನಿರಂತರವಾಗಿ ವಿಫಲವಾಗುತ್ತಿದೆ’ ಎಂದು ಅಭಿಪ್ರಾಯಪಟ್ಟಿತು.
ಅಲ್ಲದೆ, ಕೋರ್ಟ್ ಆದೇಶ ಪಾಲನೆಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಯಾವ ಅಧಿಕಾರಿಗಳು ಹೊಣೆ? ಎಷ್ಟು ಗುಂಡಿ ಮುಚ್ಚಲಾಗಿದೆ ಎಂಬ ಬಗ್ಗೆ ಸಮಗ್ರ ವಿವರಣೆಯುಳ್ಳ ವರದಿಯನ್ನು ಪ್ರಮಾಣ ಪತ್ರದ ರೂಪದಲ್ಲಿಸಲ್ಲಿಸಬೇಕು’ ಎಂದು ಸೂಚನೆ ನೀಡಿ ವಿಚಾರಣೆಯನ್ನು ನ.2ಕ್ಕೆ ಮುಂದೂಡಿತು.ರಸ್ತೆಗುಂಡಿಗಳಲ್ಲಿ ಹೂಕುಂಡ, ನೆಲಚಕ್ರ ಪಟಾಕಿಗಳನ್ನು ಸಿಡಿಸಿ ಜಾಗೃತಿ ಮೂಡಿಸಲಾಗಿದೆ.
ಇನ್ನಾದ್ರೂ ಬೆಂಗಳೂರು ದಕ್ಷಿಣ ವಿಭಾಗದ ಬಿಬಿಎಂಪಿ ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತು ಕೆಲಸ ಮಾಡುತ್ತಾರಾ ಎಂದು ನೋಡಬೇಕಿದೆ ಎಂದು ನವೀನ್ ತಿಳಿಸಿದ್ದಾರೆ.