Weatherಬೆಂಗಳೂರು

ರಸ್ತೆಯಲ್ಲೇ ಈಜಾಡಿ, ಹೆಜ್ಜೆ ಹೆಜ್ಜೆಗೂ ಗುಂಡಿ..! ಬಿಬಿಎಂಪಿಗೆ ಏನೂ ಮಾಡಕ್ಕಾಗಲ್ಲ, ಬಿಟ್ಬಿಡಿ..!

ರಾಜಧಾನಿ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಬೆನ್ನಲ್ಲೇ, ನಗರದ ಹಲವು ಪ್ರದೇಶಗಳಲ್ಲಿ ಆಳೆತ್ತರ ನೀರು ನಿಲ್ಲುತ್ತಿದೆ. ಇದರಿಂದ ಕಂಗೆಟ್ಟಿರುವ ನಿವಾಸಿಗಳು, ಟ್ವಿಟ್ಟರ್‌ನಲ್ಲಿ ಬಿಬಿಎಂಪಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ನಡು ರಸ್ತೆಯಲ್ಲೇ ಸ್ವಿಮ್ಮಿಂಗ್ ಪೂಲ್‌ ನಿರ್ಮಾಣ ಆಗಿವೆ. ಮಕ್ಕಳ ಸ್ನೇಹಿ ಈಜು ಕೊಳಗಳನ್ನು ರಸ್ತೆ ಮಧ್ಯೆ ನಿರ್ಮಾಣ ಆಗುವಂತೆ ಮಾಡಿದ ಬಿಬಿಎಂಪಿಗೆ ಧನ್ಯವಾದ ಎಂದು ಗೌತಮ್ ಎಂಬುವರು ವ್ಯಂಗ್ಯವಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಇದೀಗ #BengaluruRains ಹಾಗೂ #BBMP ಹ್ಯಾಷ್‌ಟ್ಯಾಗ್‌ಗಳು ಭಾರೀ ಟ್ರೆಂಡ್ ಆಗಿವೆ. ಅದರಲ್ಲೂ ಇಂದಿರಾ ನಗರ ಹಾಗೂ ಸುತ್ತಮುತ್ತಲ ನಿವಾಸಿಗಳು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಿ. ವಿ. ರಾಮನ್ ನಗರದ ನಿವಾಸಿ ಅಮಿತ್ ಕುಮಾರ್ ನಾಯಕ್ ಎಂಬುವರು ತಮ್ಮ ಏರಿಯಾದಲ್ಲಿ ಮಳೆ ನೀರು ನಿಂತಿರುವ ಕುರಿತಾಗಿ ವಿಡಿಯೋ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಐಟಿ ಪಾರ್ಕ್‌, ಡಿಆರ್‌ಡಿಒನಂಥಾ ಪ್ರತಿಷ್ಠಿತ ಸಂಸ್ಥೆಗಳೇ ಇರುವ ಪ್ರದೇಶದ ಸ್ಥಿತಿಗತಿ ಇದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತ ಸರ್ಜಾಪುರ ರಸ್ತೆಯಲ್ಲಿ ಇರುವ ರೈನ್‌ ಬೋ ಡ್ರೈವ್ ಬಡಾವಣೆಯಲ್ಲಿ ಜನರನ್ನು ಟ್ರ್ಯಾಕ್ಟರ್‌ಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗುತ್ತಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಟ್ರ್ಯಾಕ್ಟರ್ ಬಳಕೆ ಮಾಡಲಾಗುತ್ತಿದೆ.

ನಿರಂತರ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳೂ ನಿರ್ಮಾಣ ಆಗಿವೆ. ಗಂಟೆಗೆ 60 ಕಿ. ಮೀ. ಗಿಂತಾ ಹೆಚ್ಚು ವೇಗದಲ್ಲಿ ಬರುವ ಬೈಕ್ ಸವಾರರು ಈ ಗುಂಡಿಯಿಂದಾಗಿ ಮೂಳೆ ಮುರಿದುಕೊಳ್ಳಬಹುದು, ಸಾವೂ ಸಂಭವಿಸಬಹುದಾಗಿದೆ ಎಂದು ಮಹೇಶ್ ಎಂಬುವರು ಆತಂಕ ಹೊರಹಾಕಿದ್ದಾರೆ.

ಈ ನಡುವೆ ಬಿಬಿಎಂಪಿ ಮಳೆಯಲ್ಲೇ ಗುಂಡಿ ಮುಚ್ಚುವ ಕಾಮಗಾರಿ ನಡೆಸುತ್ತಿದೆ. ಇದರ ವಿರುದ್ಧವೂ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುರಿವ ಮಳೆಯಲ್ಲಿ ಗುಂಡಿ ಮುಚ್ಚೋಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ವಾತಾವರಣ ಉತ್ತಮವಾಗಿದೆ. ಆದ್ರೆ ಮೂಲ ಸೌಕರ್ಯದ್ದೇ ಕೊರತೆ ಎನ್ನುತ್ತಾರೆ ಟ್ವಿಟ್ಟರ್ ಬಳಕೆದಾರರಾದ ಸಹನಾ.. ಆಟೋ, ಕಾರ್ ಹಾಗೂ ದ್ವಿಚಕ್ರ ವಾಹನ ಚಾಲಕರು ನೀರು ತುಂಬಿರುವ ರಸ್ತೆಯಲ್ಲಿ ಪರದಾಡುವ ದೃಶ್ಯಗಳನ್ನು ಅವರು ಟ್ಯಾಗ್ ಮಾಡಿದ್ದಾರೆ.

ಶ್ರೀನಿವಾಸ್ ಎಂಬುವರು ಬೆಂಗಳೂರಿನ ಆರ್. ಆರ್. ನಗರದ ವಿಡಿಯೋ ಒಂದನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಬಿಬಿಎಂಪಿ ಸಿಬ್ಬಂದಿ ಇತ್ತ ಗಮನ ಹರಿಸಿ, ಗುಂಡಿ ತುಂಬಿದ ರಸ್ತೆಯಲ್ಲಿ ನಿತ್ಯ ಸಂಚರಿಸೋದೇ ಕಷ್ಟವಾಗಿದೆ ಎಂದು ಬೇಸರ ತೋಡಿಕೊಂಡಿದ್ದಾರೆ.

ಸೂರಜ್ ಎಂಬುವರು ಬೆಂಗಳೂರು ಹೊರ ವಲಯದ ಕುಂದಲ ಹಳ್ಳಿ ಬಳಿ ರಸ್ತೆ ಗುಂಡಿ ಹಾಗೂ ಮಳೆ ನೀರು ನಿಂತಿರುವ ಚಿತ್ರಣವನ್ನು ಟ್ವಿಟ್ಟರ್‌ನಲ್ಲಿ ತೆರೆದಿಟ್ಟಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದ್ದಾರೆ.ಇಂಥಾ ಅಸಂಖ್ಯಾತ ವಿಡಿಯೋಗಳು, ಫೋಟೋಗಳು ಟ್ವಿಟ್ಟರ್‌ನಲ್ಲಿ ಕಾಣ ಸಿಗುತ್ತಿವೆ.

#bbmp ಹಾಗೂ #BengaluruRains ಹ್ಯಾಷ್ ಟ್ಯಾಗ್‌ನ ಅಡಿ ಜನರು ತಮ್ಮ ಆಕ್ರೋಶ ತೋಡಿಕೊಳ್ಳುತ್ತಿದ್ದಾರೆ. ಎಡಬಿಡದೆ ಸುರಿಯುತ್ತಿರುವ ಮಳೆ ಹಾಗೂ ರಸ್ತೆ ಗುಂಡಿಗಳು ವಾಹನ ಸವಾರರಿಗೆ ನಿಜಕ್ಕೂ ಕಂಟಕವಾಗಿ ಪರಿಣಮಿಸಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button